ಮಡಿಕೇರಿ, ಡಿ. 14: ಕಳೆದೆರಡು ವರ್ಷಗಳಲ್ಲಿ ಕೊಡಗಿನಲ್ಲಿ ಆನೆ ಹಾಗೂ ಮಾನವ ಸಂಘರ್ಷದಿಂದ 13 ಮಂದಿ ಸಾವನ್ನಪ್ಪಿದ್ದು, ಈ ಕುಟುಂಬಗಳಿಗೆ ತಲಾ ರೂ. 5 ಲಕ್ಷದಂತೆ ಒಟ್ಟು ಮೊತ್ತ ರೂ. 65 ಲಕ್ಷ ಪರಿಹಾರ ನೀಡಲಾಗಿದೆ ಎಂದು ರಾಜ್ಯ ವನ್ಯಜೀವಿ ಮತ್ತು ಪರಿಸರ ಖಾತೆ ಸಚಿವ ಶಂಕರ್ ತಿಳಿಸಿದ್ದಾರೆ. ಮೇಲ್ಮನೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಕಾಡಾನೆ ಹಾವಳಿ ತಡೆಗೆ ಇಲಾಖೆಯಿಂದ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕಾಡಾನೆ ಹಾವಳಿ ನಿಯಂತ್ರಿಸಲು 20 ಕಿ.ಮೀ. ಕಂದಕ ನಿರ್ಮಾಣ, ಕಾಡಿನ ಕೆರೆಗಳ ಅಭಿವೃದ್ಧಿ, ಆನೆ ಕಂದಕ, ಬ್ಯಾರಿಕೇಡ್‍ಗಳ ರಚನೆ ಇತ್ಯಾದಿ ಯೋಜನೆ ಸಹಿತ ಕ್ಷಿಪ್ರ ಸ್ಪಂದನ ಪಡೆ ರಚಿಸಿ, ಈ ಪಡೆಯು ನಾಡಿಗೆ ಬರುವ ಕಾಡಾನೆಗಳನ್ನು ಕಾಡಿಗಟ್ಟಲು ತ್ವರಿತ ಗಮನ ಹರಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ ಜಿಲ್ಲೆಯಲ್ಲಿ 27 ಮಂದಿ ಕಾಡಾನೆ ಧಾಳಿಯಿಂದ ಗಾಯ ಗೊಂಡಿದ್ದು, ಅಂತಹ ಕುಟುಂಬಗಳಿಗೆ ಚಿಕಿತ್ಸಾ ವೆಚ್ಚ ಭರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ 6044 ಕಡೆ ಕೃಷಿ ಫಸಲು ಹಾನಿ ಪ್ರಕರಣಗಳು ದಾಖಲಾಗಿದ್ದು, ಅಂತಹ ರೈತರಿಗೆ ನಷ್ಟ ಪರಿಹಾರ ಕಲ್ಪಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ದೇಣಿಗೆ ಸಂಗ್ರಹ : ಕೊಡಗಿನ ಪ್ರಾಕೃತಿಕ ವಿಕೋಪ ಹಾನಿ ಸಂಬಂಧ ಇದುವರೆಗೆ ರೂ. 103.01 ಕೋಟಿ ಸಾರ್ವಜನಿಕ ದೇಣಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮೆಗೊಂಡಿದೆ ಎಂದು ಸುನಿಲ್ ಸುಬ್ರಮಣಿ ಅವರ ಮತ್ತೊಂದು ಪ್ರಶ್ನೆಗೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಉತ್ತರಿಸಿದ್ದಾರೆ.

ಕಾಲೇಜಿಗೆ ಸಮಸ್ಯೆ : ಜಿಲ್ಲೆಯಲ್ಲಿ ಆರು ಸರಕಾರಿ ಪದವಿ ಕಾಲೇಜುಗಳು ಸ್ಥಾಪನೆಗೊಂಡಿದ್ದು, ಮಡಿಕೇರಿ ಪದವಿ ಕಾಲೇಜು ಹಾಗೂ ಮಹಿಳಾ ಕಾಲೇಜುಗಳಿಗೆ ತಲಾ ರೂ. 2 ಕೋಟಿ ಹಣ ಕಲ್ಪಿಸಿದರೂ, ಸ್ವಂತ ನಿವೇಶನದ ಕೊರತೆಯಿಂದ ಮೂಲ ಸೌಲಭ್ಯಕ್ಕೆ ಕೊರತೆಯಾಗಿದೆ ಎಂದು ಮೇಲ್ಮನೆ ಸದಸ್ಯರ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಉತ್ತರಿಸಿದ್ದಾರೆ. ಇನ್ನು ಕುಶಾಲನಗರ, ವೀರಾಜಪೇಟೆ, ನಾಪೋಕ್ಲು, ಸೋಮವಾರಪೇಟೆ ಕಾಲೇಜುಗಳಿಗೆ ಅನುದಾನ ಕಲ್ಪಿಸಿ ಮೂಲ ಸೌಕರ್ಯ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಿವೇಶನ ಪರಿವರ್ತನೆ : ಜಿಲ್ಲೆಯಲ್ಲಿ ಮನೆ ನಿವೇಶನಗಳ ಭೂಪರಿವರ್ತನೆ ಬಗ್ಗೆ ಸುನಿಲ್ ಸುಬ್ರಮಣಿ ಅವರ ಇನ್ನೊಂದು ಪ್ರಶ್ನೆಗೆ ಪೌರಾಡಳಿತ ಸಚಿವಾಲಯ ಉತ್ತರಿಸಿ, 1976ರ ಮುಂಚಿನ ಕಾಯ್ದೆ ಅಡಿಯಲ್ಲಿ ಮಾತ್ರ ಕಟ್ಟಡ ಪರಿವಾನಗಿಗೆ ತಾಂತ್ರಿಕ ಒಪ್ಪಿಗೆ ನೀಡಲಾಗುತ್ತದೆ ಎಂದು ಈ ಹಿಂದಿನ ಆದೇಶವನ್ನೇ ಸಮರ್ಥಿಸಿಕೊಂಡಿದೆ.

ಹಣ ಬಾಕಿ : ಕೊಡಗು ಜಿ.ಪಂ. ವ್ಯಾಪ್ತಿಯ ಪಂಚಾಯತ್ ರಾಜ್ ರಸ್ತೆ ಅಭಿವೃದ್ಧಿ ಹಣ ಸರಕಾರದಿಂದ ರೂ. 888.60 ಲಕ್ಷ ಬಾಕಿಯೊಂದಿಗೆ, 75 ಕಾಮಗಾರಿಗಳನ್ನು ಹಣದ ಕೊರತೆಯಿಂದ ಕೈ ಬಿಡಲು ಸೂಚಿಸಲಾಗಿದೆ ಎಂದು ಸುನಿಲ್ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಉತ್ತರಿಸಿದ್ದು, ಮುಂದುವರಿದ ಕಾಮಗಾರಿಗೆ ರೂ. 538.60 ಲಕ್ಷ ಬಾಕಿ ಪಾವತಿಯಾಗಬೇಕಿದೆ ಎಂದು ವಿವರ ನೀಡಿದ್ದಾರೆ.