ವೀರಾಜಪೇಟೆ, ಡಿ. 14: ಸುಮಾರು 75 ವರ್ಷಗಳಷ್ಟು ಹಳೆಯದಾದ ಬಾವಿಯೊಂದು ಇಂದು ಬೆಳಿಗ್ಗೆ ದಿಢೀರನೆ ಕುಸಿದು ಬಿದ್ದ ಘಟನೆ ವೀರಾಜಪೇಟೆ ಸಮೀಪದ ಕೆ.ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ. ಇದು ಕದನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು ಬೋಯಿಕೇರಿ ಗ್ರಾಮದ ಸುಮಾರು 150 ಕುಟುಂಬಗಳಿಗೆ ಇದೇ ಬಾವಿ ನೀರು ಆಸರೆಯಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 75 ವರ್ಷಗಳ ಹಿಂದೆ ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದ ಎಸ್.ಎಸ್. ರಾಮಮೂರ್ತಿ ಹಾಗೂ ವೀರಾಜಪೇಟೆ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮದ ಕೆಲವು ಜನರು ಸೇರಿ ನಿರ್ಮಿಸಿದ ಬಾವಿ ಇದಾಗಿತ್ತು.

ಕಳೆದ 30 ವರ್ಷಗಳಿಂದ ಕದನೂರು ಗ್ರಾಮ ಪಂಚಾಯಿತಿ ಇದನ್ನು ನಿರ್ವಹಣೆ ಮಾಡುತ್ತಿತ್ತು. ಇದರ ಪಕ್ಕದಲ್ಲೇ ಇದ್ದ ಬಾವಿಯೊಂದು ಮೊದಲೆ ಕುಸಿದಿದ್ದು, ಈ ಬಾವಿಯೂ ಕುಸಿಯುವ ಹಂತ ತಲಪಿರುವದರಿಂದ ಇದನ್ನು ಕೂಡಲೇ ಸರಿಪಡಿಸುವಂತೆ ಕೇಳಿಕೊಂಡರೂ ಇದುವರೆಗೆ ಸಂಭಂದಪಟ್ಟವರು ಗಮನಹರಿಸಿಲ್ಲ. ಇದೀಗ ಬಾವಿ ಸಂಪೂರ್ಣ ಕುಸಿದು ಬಿದ್ದಿದ್ದು ನೀರಿಗೆ ಆಸರೆಯಾಗಿದ್ದಿದ್ದು ಕೂಡ ಇಲ್ಲದಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮತ್ತೆ ಬಾವಿಯ ಅಕ್ಕ ಪಕ್ಕ ಕುಸಿಯುವ ಭೀತಿ ಕಂಡುಬರುತ್ತಿರುವದರಿಂದ ಪಕ್ಕದಲ್ಲಿರುವ ಮನೆಗಳನ್ನು ಖಾಲಿ ಮಾಡುವಂತೆ ಗ್ರಾಮ ಪಂಚಾಯಿತಿ ಸೂಚನೆ ನೀಡಿದೆ.

ದನ- ಕರುಗಳು, ಜನರು ಯಾರೂ ಅದರ ಬಳಿ ಹೋಗದಂತೆ ಗ್ರಾಮಸ್ಥರು ತಾತ್ಕಾಲಿಕ ಬೇಲಿ ನಿರ್ಮಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವದಕ್ಕೆ ಮೊದಲು ಕಾಮಗಾರಿ ಆರಂಭಿಸುವಂತೆ ಅಥವಾ ಹೊಸ ಬಾವಿ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದರಲ್ಲದೆ ಇದುವರೆಗೆ ಯಾವ ಜನಪ್ರತಿನಿಧಿಗಳು ಬೇಟಿ ನೀಡಿಲ್ಲ ಎಂದು ದೂರಿದರು. ಬಾವಿ ಕುಸಿದ ಸ್ಥಳದಲ್ಲಿ ಅಮ್ಮುಣಿಚಂಡ ರಾಜ ನಂಜಪ್ಪ ಸೇರಿದಂತೆ ಗ್ರಾಮಸ್ಥರಾದ ನಿತೇಶ್, ಪಿ. ಚಂದ್ರು, ವಿಜಯಕುಮಾರ್, ಟಿ.ಡಿ. ಸೋಮಯ್ಯ ಇನ್ನಿತರ ಗ್ರಾಮಸ್ಥರು ಸೇರಿದ್ದರು.

-ರಂಜಿತಾ