ಕೂಡಿಗೆ, ಡಿ. 14: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯ ಅರಶಿನಗುಪ್ಪೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಕೊಡಗಿನ ಕಾವೇರಿ ಜ್ಞಾನವಿಕಾಸ ಕೇಂದ್ರದ ಸೃಜನಶೀಲ ಕಾರ್ಯಕ್ರಮ ದಡಿಯಲ್ಲಿ ಹಮ್ಮಿಕೊಂಡಿದ್ದ ಕಸದಿಂದ ರಸ ಹಾಗೂ ಪ್ಲಾಸ್ಟಿಕ್ ನಿಷೇಧದ ಸಮಾರೋಪ ಸಮಾರಂಭ ನಡೆಯಿತು.
ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್ ಕಾರ್ಯಕ್ರಮ ಉದ್ಘಾಟಿಸಿ ಯೋಜನೆಯಿಂದ ಮಹಿಳೆಯರಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ವೈ ಅವರು, ಕೇಂದ್ರದ ಮನೆಗಳಲ್ಲಿ ಸಂಗ್ರಹ ಮಾಡುವ ಕಸವನ್ನು ಒಣಕಸ, ಹಸಿಕಸ ಬೇರೆ ಬೇರೆ ವಿಂಗಡಣೆ ಮಾಡಿ ಕಸದ ತೊಟ್ಟಿಗೆ ಹಾಕಬೇಕು ಇದರಿಂದ ಪರಿಸರ ಸ್ವಚ್ಛವಾಗಿರುತ್ತದೆ ಎಂದರು. ಪತ್ರಕರ್ತ ದಿನೇಶ್ ಮಾಲಂಬಿ ಮೊದಲು ನಮ್ಮ ಮನೆ ಸುತ್ತಮುತ್ತ ಸ್ವಚ್ಛವಾಗಿಡಬೇಕು. ಮಕ್ಕಳು ಎಲ್ಲೆಂದರಲ್ಲಿ ಬಿಸಾಕುವ ಕಸಗಳನ್ನು ಕಸದ ತೊಟ್ಟಿಗೆ ಹಾಕುವಂತೆ ತಿಳಿಸಬೇಕು ಎಂದರು.
ತೊರೆನೂರು ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್ ಎರೆ ಘಟಕಗಳನ್ನು ರಚನೆ ಮಾಡಿ ಮನೆಯಲ್ಲೇ ಸಿಗುವ ಹಸಿ ಕಸಗಳನ್ನು ಹಾಕಿದಲ್ಲಿ ಎರೆ ಗೊಬ್ಬರ ನಾವೇ ತಯಾರಿಸ ಬಹುದು ಎಂದು ಹೇಳಿದರು.
ಜ್ಞಾನವಿಕಾಸ ಕಾರ್ಯಕ್ರಮದ ಉದ್ದೇಶ, ಯೋಜನೆಯ ಬಗ್ಗೆ ಮೇಲ್ವಿಚಾರಕ ವಿನೋದ್ ಕುಮಾರ್ ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯೆ ತಾರಾ ಉದಯಕುಮಾರ್ ಮತ್ತು ಕಿಶೋರ್ಕುಮಾರ್ ಅಭಿನಂದನಾ ಪತ್ರ ವಿತರಿಸಿದರು. ಜ್ಞಾನವಿಕಾಸ ಸಂಯೋಜಕಿ ವಿಮಲ ನಿರೂಪಿಸಿದರು, ಒಕ್ಕೂಟದ ಉಪಾಧ್ಯಕ್ಷೆ ಪಾರ್ವತಿ ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರು ಹಾಜರಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಪದ್ಮ ಸ್ವಾಗತಿಸಿ, ಸೇವಾಪ್ರತಿನಿಧಿ ಮಂಜುಳಾ ವಂದಿಸಿದರು.