ಮಕ್ಕಂದೂರು ಗ್ರಾಮಸ್ಥರ ಅಸಮಾಧಾನ : ಜಿಲ್ಲಾಡಳಿತಕ್ಕೆ ಮನವಿ
ಮಡಿಕೇರಿ, ಡಿ.14 : ಕೊಡಗು ಜಿಲ್ಲೆಯಲ್ಲಿ ಮಹಾಮಳೆಯಿಂದ ಹಾನಿ ಸಂಭವಿಸಿ ನಾಲ್ಕು ತಿಂಗಳುಗಳೇ ಕಳೆದಿದ್ದರೂ ಸಂತ್ರಸ್ತರಿಗೆ ತೃಪ್ತಿಯಾಗುವ ರೀತಿಯಲ್ಲಿ ಪರಿಹಾರ ಕಾರ್ಯಗಳು ನಡೆಯುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದೆ.
ಸರ್ಕಾರದ ಸೌಲಭ್ಯದಿಂದ ವಂಚಿತರಾಗಿರುವ ಅನೇಕ ಮಂದಿ ಸಂತ್ರಸ್ತರು ಕಚೇರಿಯಿಂದ ಕಚೇರಿಗೆ ಇಂದಿಗೂ ಅಲೆದಾಡುತ್ತಲೇ ಇದ್ದಾರೆ. ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಹಾನಿಯಾಗಿದ್ದರೂ ಈ ಭಾಗದ ಗ್ರಾಮಸ್ಥರ ಸಂಕಷ್ಟಕ್ಕೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎನ್ನುವ ಅಸಮಾಧಾನವಿದೆ.
ಮೊದಲ ಹಂತದಲ್ಲಿ ಸಂತ್ರಸ್ತರ ಪಟ್ಟಿಯಲ್ಲಿದ್ದ ನೊಂದ ಗ್ರಾಮಸ್ಥರ ಹೆಸರನ್ನು ನಂತರದ ದಿನಗಳಲ್ಲಿ ಕೈ ಬಿಡಲಾಗಿದೆ. ಇದರಿಂದ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂತ್ರಸ್ತರು ಇಂದು ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರ ನೀಡುವ ವಸತಿ ಸೌಲಭ್ಯವನ್ನು ನಮಗೂ ನೀಡಬೇಕೆಂದು ಮನವಿ ಮಾಡಿದರು. ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಮುಕ್ಕೋಡ್ಲು, ಆವಂಡಿ, ಮೇಘತ್ತಾಳು, ಹೊದಕಾನ ಗ್ರಾಮಸ್ಥರು ಮೊದಲು ತಹಶೀಲ್ದಾರ್ ಕುಸುಮ ಅವರಿಗೆ ಮನವಿ ಸಲ್ಲಿಸಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸಂತ್ರಸ್ತರ ಪಟ್ಟಿಗೆ ಸಂಕಷ್ಟದಲ್ಲಿರುವ ಗ್ರಾಮಸ್ಥರ ಹೆಸರನ್ನು ಸೇರಿಸಬೇಕು ಮತ್ತು ಸರ್ಕಾರ ನೀಡುವ ಮನೆಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು. ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವದಾಗಿ ಎಚ್ಚರಿಕೆ ನೀಡಿದರು.
ಮಕ್ಕಂದೂರು ಗ್ರಾ.ಪಂ ವ್ಯಾಪ್ತಿಯ ಬಹುತೇಕ ಎಲ್ಲಾ ಗ್ರಾಮಗಳು ಹಾನಿಗೊಳಗಾಗಿದ್ದು, ಗ್ರಾಮಸ್ಥರು ನೋವಿನ ದಿನಗಳನ್ನು ಕಳೆಯುತ್ತಿದ್ದಾರೆ. ಪಿಡಿಒ, ಆರ್ಐ ಹಾಗೂ ಸಹಾಯಕ ಗ್ರಾಮ ಲೆಕ್ಕಿಗರು ರಾಜಕೀಯ ಪಕ್ಷಗಳ ಪ್ರಭಾವಕ್ಕೆ ಮಣಿದು ನೈಜ ಸಂತ್ರಸ್ತರನ್ನು ಕಡೆಗಣಿಸಿದ್ದಾರೆ, ಅಲ್ಲದೆ ಸಂತ್ರಸ್ತರ ಪಟ್ಟಿಯಿಂದ ಹೆಸರು ತೆಗೆದಿದ್ದಾರೆ ಎಂದು ಬಹುತೇಕ ಗ್ರಾಮಸ್ಥರು ಆರೋಪಿಸಿದರು.
ಒಂದೇ ಕುಟುಂಬದ 5-6 ಮಂದಿಗೆ ಮನೆಯನ್ನು ಮಂಜೂರು ಮಾಡಿರುವ ಬಗ್ಗೆ ಮಾಹಿತಿ ಇದ್ದು ಕರ್ತವ್ಯ ಲೋಪವೆಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಪರಿಹಾರ ಕಾರ್ಯಗಳ ನಿರ್ವಹಣೆಗೆ ನಿಯೋಜಿಸಬೇಕು. ಒಬ್ಬ ಸಂತ್ರಸ್ತ ಕೂಡ ಸರ್ಕಾರದ ಸೌಲಭ್ಯದಿಂದ ವಂಚಿತನಾಗದಂತೆ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮುಂದಿನ ಒಂದು ತಿಂಗಳೊಳಗೆ ನೈಜ ಫಲಾನುಭವಿಗಳ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವದಾಗಿ ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ಸಂದರ್ಭ ಮುಕ್ಕೋಡ್ಲು, ಆವಂಡಿ, ಮೇಘತ್ತಾಳು, ಹೊದಕಾನ ಗ್ರಾಮಸ್ಥರು ಹಾಜರಿದ್ದರು. ಗ್ರಾಮಸ್ಥರ ದೂರನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವದಾಗಿ ಅಧಿಕಾರಿಗಳು ಭರವಸೆ ನೀಡಿದರು.