ಟಿ ಹಾಕಿಯಲ್ಲೂ ಭವಿಷ್ಯವಿದೆ ಟಿ ವಿ.ಎಸ್. ವಿನಯ್

ಮಡಿಕೇರಿ, ಡಿ. 14: ಭಾರತೀಯ ಹಾಕಿ ತಂಡದಲ್ಲಿ ಕಳೆದ ಹಲವಷ್ಟು ವರ್ಷಗಳಿಂದ ಕೊಡಗಿನ ಆಟ ಗಾರರು ಪ್ರಾಬಲ್ಯ ತೋರುತ್ತಿದ್ದರು. ಆದರೆ ಪ್ರಸ್ತುತದ ತಂಡದಲ್ಲಿ ಕೊಡಗಿನ ಯಾವೊಬ್ಬ ಆಟಗಾರರೂ ಇಲ್ಲದಿರುವದು ಬೇಸರ ಉಂಟು ಮಾಡಿದೆ ಎಂದು ಖ್ಯಾತ ಮಾಜಿ ಆಟಗಾರ ವಿ.ಎಸ್. ವಿನಯ್ ಅವರು ಹೇಳಿದರು.

ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿರುವ ಕೊಡಗಿನ ಈ ಮಾಜಿ ಆಟಗಾರ ‘ಶಕ್ತಿ’ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಹಾಕಿ ಆಟದಲ್ಲೂ ಯುವಕರಿಗೆ ಉತ್ತಮ ಭವಿಷ್ಯವಿದೆ. ಉದ್ಯೋಗಾವಕಾಶವೂ ಸೇರಿದಂತೆ ತಮ್ಮಲ್ಲಿನ ಪ್ರತಿಭೆಯನ್ನು ತೋರುವ ಮೂಲಕ ದೇಶಕ್ಕೆ ಕೊಡುಗೆ ನೀಡಲು ಸಾಧ್ಯವಿದೆ, 2006ರಿಂದ ಭಾರತ ತಂಡದಲ್ಲಿ ಜಿಲ್ಲೆಯ ಕನಿಷ್ಟ ಮೂರರಿಂದ ನಾಲ್ಕು ಆಟಗಾರರು ಇರುತ್ತಿದ್ದು, ಇದೀಗ ಒಮ್ಮೆಲೆ ಯಾರೂ ಇಲ್ಲದಂತಾಗಿದೆ ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಪೋಷಕರೂ ಮಕ್ಕಳನ್ನು ಉತ್ತೇಜಿಸಬೇಕಿದೆ ಎಂದು ವಿನಯ್ ಹೇಳಿದರು.

ಕೊಡಗಿನ ಯುವ ಆಟಗಾರರಿಗೆ, ಕೊಡಗಿನ ಸಾಕಷ್ಟು ಆಟಗಾರರೇ ಸ್ಫೂರ್ತಿದಾಯಕರಾಗಿದ್ದಾರೆ. ಪರಿಣಿತರ, ಪ್ರತಿಭಾನ್ವಿತ ಹಿರಿಯರ ದಾರಿಯಲ್ಲಿ ಯುವಕರು ಮುಂದಡಿಯಿಡಬೇಕೆಂದರು.

ದೇಶಕ್ಕೆ ಕೊಡುಗೆಯಾದ ಮಡಿಕೇರಿಯ ಪ್ರತಿಭೆ

ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಬಿ.ಸ್ವಾಮಿ ಹಾಗೂ ಕಮಲ ದಂಪತಿಯ ಪುತ್ರನಾಗಿ ಜನಿಸಿದ ವಿನಯ್, ಮ್ಯಾನ್ಸ್ ಕಾಂಪೌಂಡ್‍ನಲ್ಲಿ ಹಾಕಿ ಆಡುವ ಮೂಲಕ ಬೆಳೆದು ಬಂದವರಾಗಿದ್ದು, ದೇಶಕ್ಕೆ ಕೊಡುಗೆಯಾಗಿದ್ದಾರೆ.

1995ರಲ್ಲಿ ವಾಂಡರರ್ಸ್ ತಂಡದೊಂದಿಗೆ ಜೂನಿಯರ್ ಕಾಲೇಜಿನಿಂದ ಆಟ ಆರಂಭಿಸಿದ ಇವರು ನಂತರ ಸಾಯಿ ತಂಡಕ್ಕೆ ಆಯ್ಕೆಯಾದರು. ಆರಂಭದಲ್ಲಿ ವಾಂಡರರ್ಸ್ ಮೂಲಕ ಉತ್ತೇಜನ ನೀಡಿದ ಕಾಳಪ್ಪ, ಕೋಟೆರ ನಾಣಯ್ಯ, ಪಿ.ಡಿ.ಪೊನ್ನಪ್ಪ, ಚುಮ್ಮಿ ದೇವಯ್ಯ, ಕಿಶನ್ ಪೂವಯ್ಯ ಮತ್ತಿತರರು ಸಹಕಾರ ನೀಡಿದರು. ನಂತರ ಸಾಯಿಯಲ್ಲಿ ಆಡುತ್ತಿದ್ದಾಗ ಅಲ್ಲಿಗೆ ತರಬೇತಿ ನೀಡಲು ಆಗಮಿಸುತ್ತಿದ್ದ ಹಿರಿಯ ಆಟಗಾರ ಎ.ಬಿ. ಸುಬ್ಬಯ್ಯ ಅವರು ತಮ್ಮ ಆಟವನ್ನು ಗಮನಿಸಿ ಇಂಡಿಯನ್ ಏರ್‍ಲಯನ್ಸ್ ತಂಡಕ್ಕೆ ಆಡಿಸಿದ್ದನ್ನು ಸ್ಮರಿಸಿಕೊಂಡ ವಿನಯ್, ಇದು ಸಾಧನೆಗೆ ಪೂರಕವಾಯಿತು. ಇದರೊಂದಿಗೆ ಸಾಯಿಯ ಆಗಿನ ಕೋಚ್ ವಿಶ್ವನಾಥ್ ಪ್ರಭಾಕರ್, ಅಶ್ವಥ್ ಅವರುಗಳು ನೀಡಿದ ತರಬೇತಿ ವೃತ್ತಿ ಬದುಕಿಗೆ ಪೂರಕವಾಯಿತು ಎಂದರು.

2001ರಲ್ಲಿ ಈಜಿಪ್ಟ್ ಪ್ರವಾಸ, ಕರ್ನಾಟಕ ತಂಡದ ಮೂಲಕ ಮುರುಗಪ್ಪ ಗೋಲ್ಡ್‍ಕಪ್, ಬಳಿಕ ವಿಶ್ವಕಪ್ ಕ್ಯಾಂಪ್‍ನ ಮೂಲಕ ಪರಿಚಿತರಾದ ವಿನಯ್ ನಂತರ ದೇಶಕ್ಕೆ ತಂಡದ ಆಟಗಾರನಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಆರಂಭದಲ್ಲಿ ಭಾರತ ಎ ತಂಡಕ್ಕೆ ಆಯ್ಕೆಗೊಂಡ ಇವರು 2003ರಲ್ಲಿ ಮುಖ್ಯ ತಂಡ ಸೇರ್ಪಡೆಗೊಂಡರು. ನಂತರ ಜರ್ಮನಿ, ಪಾಕಿಸ್ತಾನ, ಯೂರೋಪ್ ಸೇರಿದಂತೆ ಹಲವು ದೇಶಗಳಲ್ಲಿ ತಂಡವನ್ನು ವಿವಿಧ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿದ್ದಾರೆ. ಏಷ್ಯನ್ ಗೇಮ್ಸ್, ಅಜ್ಞಾನ್‍ಷಾ ಕಪ್‍ನ ವಿಜೇತ ತಂಡದಲ್ಲೂ ವಿನಯ್ ಭಾರತವನ್ನು ಪ್ರತಿನಿಧಿಸಿದ್ದರು.

ಕೊಡಗಿನ ಆಟಗಾರನಾಗಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸರಕಾರ ಆಯ್ಕೆ ಮಾಡಿದ್ದು ಸಂತಸ ತಂದಿದೆ ಎಂದ ವಿನಯ್ ಅವರು ಭಾರತ ತಂಡದಲ್ಲಿ ಭವಿಷ್ಯದಲ್ಲಿ ಇನ್ನಷ್ಟು ಕೊಡಗಿನ ಆಟಗಾರರು ಪಾಲ್ಗೊಳ್ಳುವಂತಾಗಬೇಕು ಎಂದು ಆಶಿಸಿದರು. - ಶಶಿ ಸೋಮಯ್ಯ.