ಮಡಿಕೇರಿ, ಡಿ. 14 : ಕೊಡಗು ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕಿಷ್ಕಿಂಧೆಯ ನಡುವೆ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿರುವ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು, ಮುಂದಿನ ಶೈಕ್ಷಣಿಕ ವರ್ಷದಿಂದ ನೂತನವಾಗಿ ತಲೆಯೆತ್ತುತ್ತಿರುವ ವಿಶಾಲ ಕಟ್ಟಡದತ್ತ ಸ್ಥಳಾಂತರಗೊಳ್ಳಲಿದ್ದಾರೆ ಎಂದು ಸಂಬಂಧಿಸಿದ ವಿದ್ಯಾಲಯದ ಪ್ರಮುಖರು ಸುಳಿವು ನೀಡಿದ್ದಾರೆ. ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಹಿಂಭಾಗದ ವಿಶಾಲವಾದ ಪ್ರದೇಶದಲ್ಲಿ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡವು ತಲೆಯೆತ್ತುತ್ತಿದೆ.ಈ ಕಟ್ಟಡವನ್ನು ಕೇಂದ್ರೀಯ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ವಿಭಾಗದ ನುರಿತ ತಜ್ಞರ ಮೇಲುಸ್ತುವಾರಿಯಲ್ಲಿ ಮಂಗಳೂರಿನ ಗೋವರ್ಧನ್ ಕಟ್ಟಡ ನಿರ್ಮಾಣ ಸಂಸ್ಥೆಯು ಗುತ್ತಿಗೆ ಕಾಮಗಾರಿಯಲ್ಲಿ ತೊಡಗಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ಕಣ್ಣಮುಂದಿರಿಸಿ ಕೊಂಡಿರುವ ತಂತ್ರಜ್ಞರು ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಕಟ್ಟಡ ಕೆಲಸ ನಿರ್ವಹಿಸುತ್ತಿದೆ.
ಭವಿಷ್ಯದಲ್ಲಿ ಒಂದನೇ ತರಗತಿಯಿಂದ 10ನೇ ತರಗತಿವರೆಗೆ ವಿಶಾಲ ತರಗತಿ ಕೊಠಡಿಗಳಲ್ಲಿ ಮುಕ್ತ ವಾತಾವರಣದಲ್ಲಿ ವಿದ್ಯಾಭ್ಯಾಸ ಕಲಿಕೆಗೆ ಅಗತ್ಯವಾಗಿ ಮೂಲಭೂತ ಸೌಲಭ್ಯಗಳನ್ನು ರೂಪಿಸಲಾಗುತ್ತಿದೆ ಎಂದು ಗುತ್ತಿಗೆ ಸಂಸ್ಥೆಯ ಪ್ರಮುಖರು ಸುಳಿವು ನೀಡಿದ್ದಾರೆ.
ಮಳೆ ಅಡ್ಡಿ: ಕಳೆದ ಮಳೆಗಾಲದ ತೀವ್ರತೆಯು ಕಟ್ಟಡದ ಕಾಮಗಾರಿಗೆ ಅಡ್ಡಿಯಾಗಿದ್ದಲ್ಲದೆ, ಕೊಡಗಿನ ಭಯಾನಕ ಪ್ರಾಕೃತಿಕ ವಿಕೋಪದಿಂದ ಬೆಚ್ಚಿದ ಹೊರ ಜಿಲ್ಲೆಗಳ ಕಾರ್ಮಿಕರು ಕೆಲಸ ಬಿಟ್ಟು ತೆರಳಿದ್ದರಿಂದ ಸ್ವಲ್ಪ ಮಟ್ಟಿಗೆ ಕಾಮಗಾರಿ ವಿಳಂಬವಾದು ದ್ದಾಗಿ ಗುತ್ತಿಗೆ ಸಂಸ್ಥೆ ಪ್ರಮುಖರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ವಿಶೇಷ ಆದ್ಯತೆ : ನೂತನ ಕೇಂದ್ರೀಯ ವಿದ್ಯಾಲಯದ ಕಟ್ಟಡ ನಿರ್ಮಾಣ ಸಂದರ್ಭ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಆದ್ಯತೆ ಯೊಂದಿಗೆ ಕಾರ್ಯಕ್ರಮ ಸಭಾಂಗಣ, ಬಯಲು ಮಂದಿರ, ಪರೀಕ್ಷಾ ಕೊಠಡಿಗಳು, ಪ್ರಯೋಗಾ ಲಯ, ಗಣಕಯಂತ್ರ ಕೊಠಡಿ, ಭದ್ರತಾ ವ್ಯವಸ್ಥೆ ಸೇರಿದಂತೆ ಪ್ರಾಂಶು ಪಾಲರು, ಶಿಕ್ಷಕರಿಗೆ ಪ್ರತ್ಯೇಕ ವ್ಯವಸ್ಥೆ ರೂಪುಗೊಳಿಸ ಲಾಗುವದು ಎಂದು ಮಾಹಿತಿ ನೀಡಿದ್ದಾರೆ.
ರೂ. 12.76 ಕೋಟಿ : ನೂತನ ಕಟ್ಟಡವು ಕೇಂದ್ರ ಲೋಕೋಪ ಯೋಗಿ ಇಲಾಖೆಯ
(ಮೊದಲ ಪುಟದಿಂದ) ಯೋಜನೆಯಂತೆ ರೂ. 12.76 ಕೋಟಿಯ ಮೊತ್ತದಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಅರ್ಜುನ್ ಸಿಂಗ್ ‘ಶಕ್ತಿ’ಯೊಂದಿಗೆ ಮಾಹಿತಿಯಿತ್ತರು. ಈಗಾಗಲೇ ಶಾಲಾ ಕಟ್ಟಡ ಕಾಮಗಾರಿ ಪೂರ್ಣ ಹಂತದಲ್ಲಿದ್ದು, ಡಿಸೆಂಬರ್ ಕೊನೆಯ ಒಳಗಾಗಿ ಮುಗಿಯುವ ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಕಟ್ಟಡಕ್ಕೆ ಈಗಾಗಲೇ ವಿದ್ಯುತ್ ಸಂಪರ್ಕ ಕಲ್ಪಿಸಲು ಸಂಬಂಧಿಸಿದ ಇಲಾಖೆಗೆ ಪತ್ರ ಬರೆದಿದ್ದು, ನೀರು ಸೌಲಭ್ಯ ಒದಗಿಸುವಂತೆ ನಗರಸಭೆಯ ಗಮನ ಸೆಳೆಯಲಾಗಿದೆ ಎಂದು ಪ್ರಾಂಶುಪಾಲರು ವಿವರಿಸಿದರು. ಈಗಾಗಲೇ ವಿದ್ಯಾಲಯದೊಂದಿಗೆ ವಸತಿಗೃಹ, ಆಟದ ಮೈದಾನ, ಒಳಚರಂಡಿ ವ್ಯವಸ್ಥೆಯು ಮುಂದುವರಿದಿದ್ದು, ಎಲ್ಲಾ ಕೆಲಸ ಪೂರ್ಣಗೊಂಡು, ಕೇಂದ್ರೀಯ ಲೋಕೋಪಯೋಗಿ ಇಲಾಖೆ ಕೆಲಸದ ಗುಣಮಟ್ಟ ಪರಿಶೀಲಿಸಿ ದೃಢೀಕರಿಸಿದ ಬಳಿಕ, ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ಕಟ್ಟಡಕ್ಕೆ ವಿದ್ಯಾಲಯದ ಮಕ್ಕಳನ್ನು ಸ್ಥಳಾಂತರಿಸುವದಾಗಿ ಅವರು ಸ್ಪಷ್ಟ ಪಡಿಸಿದರು.
ಅಸಮಾಧಾನ: ಕೇಂದ್ರೀಯ ವಿದ್ಯಾಲಯದ ಕಾಮಗಾರಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮಾರ್ಗಸೂಚಿ ಪಾಲಿಸದೆ ಹಿಂದಿನ ಜಿಲ್ಲಾಧಿಕಾರಿಯೊಬ್ಬರು ಗುತ್ತಿಗೆದಾರರಿಗೆ ಹಣ ಪಾವತಿಸಿದ್ದಾರೆ ಎಂದು ಪೋಷಕ ಸದಸ್ಯ ಟಿ.ಎಂ. ಅಯ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದಿರುವ ಜಿಲ್ಲಾಡಳಿತ ಕಾಮಗಾರಿಗೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ. ನಿಯಮದಂತೆ ಈ ಹಿಂದೆಯೇ ಗುತ್ತಿಗೆದಾರರ ಕೆಲಸ ಪೂರೈಸಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಸಮಿತಿ ಶಾಲಾ ಚಟುವಟಿಕೆಗಳನ್ನು ನೂತನ ಕಟ್ಟಡದಲ್ಲಿ ಆರಂಭಿಸಬೇಕಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.