ಒಡೆಯನಪುರ, ಡಿ 14: ಪ್ರಸ್ತುತ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ರೋಬೋಟಿಕ್ ತಂತ್ರಜ್ಞಾನ ಶಿಕ್ಷಣ ಕ್ರಮದಿಂದ ವಿದ್ಯಾರ್ಥಿಗಳ ಶಿಕ್ಷಣದ ಪ್ರಗತಿಗೆ ಪೂರಕವಾಗುತ್ತದೆ ಎಂದು ಸಮೀಪದ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಡಿ. ಸುಜಲಾದೇವಿ ಅಭಿಪ್ರಾಯ ಪಟ್ಟರು.
ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಮತ್ತು ಬೆಂಗಳೂರಿನ ಇನೋಸ್ಟೇಮ್ ಇ ಲ್ಯಾಬ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ರೋಬೋಟಿಕ್ ತಂತ್ರಜ್ಞಾನದ ಕುರಿತು ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ಶಿಕ್ಷಣ ಕ್ರಮ ಬದಲಾಗುತ್ತಿರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನ ಶಿಕ್ಷಣದ ಕ್ರಮಕ್ಕೆ ಹೊಂದಿಕೊಳ್ಳ ಬೇಕಾಗುತ್ತದೆ, ಇದಕ್ಕೆ ಪೋಷಕರ ಪ್ರೋತ್ಸಾಹವೂ ಮುಖ್ಯವಾಗಿರುತ್ತದೆ ಎಂದರು. 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ಆವಿಷ್ಕಾರಗೊಂಡಿರುವ ರೋಬೋಟಿಕ್ ಶಿಕ್ಷಣ ಕ್ರಮದಿಂದ ವಿದ್ಯಾರ್ಥಿಗಳ ಶಿಕ್ಷಣ ಮಟ್ಟವೂ ಅಧಿಕಗೊಳ್ಳುತ್ತದೆ, ವಿಜ್ಞಾನ ತಂತ್ರ ಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಾಗುವದರ ಜೊತೆಯಲ್ಲಿ ಮಾಹಿತಿ-ತಂತ್ರಜ್ಞಾನ ದಂತಹ ಉನ್ನತ ವೃತ್ತಿಪರ ಕೋರ್ಸ್‍ಗೆ ಸೇರಲು ಇದರಿಂದ ಸಾಧ್ಯವಾಗುತ್ತದೆ ಎಂದರು.
ರೋಬೋಟಿಕ್ ಶಿಕ್ಷಣದಿಂದ ಮಕ್ಕಳಲ್ಲಿ ವೈಜ್ಞಾನಿಕ ವಿಷಯದಲ್ಲಿ ಸೃಜನಶೀಲತೆ ಮತ್ತು ಕ್ರಿಯಾ ಶೀಲತೆಗಳು ಹೆಚ್ಚಾಗುತ್ತವೆ. ಈ ದಿಸೆಯಲ್ಲಿ ನಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ರೋಬೋಟಿಕ್ ತಂತ್ರಜ್ಞಾನ ಶಿಕ್ಷಣದ ಕುರಿತು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿ ದ್ದೇವೆ ಎಂದರು.
ಬೆಂಗಳೂರಿನ ಇನೋಸ್ಟೇಮ್ ಸಂಸ್ಥೆಯ ನಜೀರ್ ಆಹಮದ್ ಮಾತನಾಡಿ, ರೋಬೋಟಿಕ್ ತಂತ್ರಜ್ಞಾನ ಶಿಕ್ಷಣದ ಅಳವಡಿಕೆಯಿಂದ ಮಕ್ಕಳು ಶೇ. 80 ರಷ್ಟು ಪ್ರಾಕ್ಟಿಕಲ್ ಕಲಿಯಲಿರುವದರಿಂದ ಮುಂದೆ ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನದ ಕೋರ್ಸ್‍ಗಳನ್ನು ಆರಿಸಿಕೊಳ್ಳಲು ಸುಲಭವಾಗುತ್ತದೆ ಎಂದರು.
ಈ ಸಂದರ್ಭ ವಿವಿಧ ರೋಬೋಟಿಕ್ ತಂತ್ರಜ್ಞಾನ ಮಾದರಿ ಗಳನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಯಿತು. ಕಾರ್ಯಾಗಾರದಲ್ಲಿ ಇನೋಸ್ಟೇಮ್ ಸಂಸ್ಥೆಯ ವ್ಯವಸ್ಥಾಪಕ ಎ.ಎಂ. ಹರೀಶ್, ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್.ಟಿ. ಗುರುಪ್ರಸಾದ್, ಪತ್ರಕರ್ತ ವಿ.ಸಿ. ಸುರೇಶ್ ಒಡೆಯನಪುರ ಮುಂತಾದವರು ಹಾಜರಿದ್ದರು.