ಮಡಿಕೇರಿ, ಡಿ. 14: ವಿದ್ಯಾರ್ಥಿ ನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಆಟೋ ಚಾಲಕ ರಜಾóಕ್ ಎಂಬಾತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸರಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಸಿ.ಸಿ. ಕ್ಯಾಮರ ಅಳವಡಿಸಬೇಕು ಎಂದು ಒತ್ತಾಯಿಸಿ ಕೊಡಗು ಜಿಲ್ಲಾ ಮೊಗೇರ ಸಮಾಜ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರಿಗೆ ಮನವಿ ಸಲ್ಲಿಸಿದೆ.
ಹಾಕತ್ತೂರು-ಕಗ್ಗೋಡ್ಲು ಬಳಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಛೇಡಿಸಿದಲ್ಲದೆ ಶಾಲೆಯ ಒಳಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬೇತ್ರಿ ನಿವಾಸಿ ಆಟೋ ಚಾಲಕ ರಜಾóಕ್‍ನ ವಿರುದ್ಧ ಪೊಲೀಸ್ ಇಲಾಖೆ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಂಡಿರುವದು ಸ್ವಾಗತಾರ್ಹ.
ಆದರೆ ಆರೋಪಿಗೆ ಜಾಮೀನು ನೀಡದ ರೀತಿಯಲ್ಲಿ ದೂರು ದಾಖಲಿಸಿಕೊಂಡು, ಯಾವದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮೊಗೇರ ಸೇವಾ ಸಮಾಜದ ಪ್ರಮುಖರು ಎಸ್‍ಪಿ ಬಳಿ ಮನವಿ ಮಾಡಿದರು.
ನೊಂದ ವಿದ್ಯಾರ್ಥಿನಿಯರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗಬೇಕಾಗಿರುವ ಪರಿಹಾರವನ್ನು ಒದಗಿಸಿಕೊಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಶಿಪಾರಸ್ಸು ಮಾಡಬೇಕು. ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಿ.ಸಿ. ಕ್ಯಾಮರವನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಮೊಗೇರ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಪಿ.ಎಂ. ರವಿ, ಪ್ರಧಾನ ಕಾರ್ಯದರ್ಶಿ ಎಂ.ಜಿ. ಚಂದ್ರ, ಸಂಚಾಲಕ ಪಿ.ಬಿ. ಜನಾರ್ಧನ, ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಬಿ. ಸುರೇಶ್ ಮತ್ತಿತರರು ಹಾಜರಿದ್ದರು.