ಸೋಮವಾರಪೇಟೆ,ಡಿ.14: ವನ್ಯಜೀವಿಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಬೇಟೆಯಾಡಿದ ವನ್ಯ ಪ್ರಾಣಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ವನ್ಯಜೀವಿ ಪ್ರದೇಶದಲ್ಲಿ ಹಂದಿ ಮತ್ತು ಮೊಲವನ್ನು ಅಕ್ರಮವಾಗಿ ಬೇಟೆಯಾಡಿ, ಮಾಂಸವನ್ನಾಗಿಸಿ ದ್ವಿಚಕ್ರ ವಾಹನದಲ್ಲಿ ಯಡೂರು ವ್ಯಾಪ್ತಿಯಲ್ಲಿ ಸಾಗಿಸುತ್ತಿದ್ದ ಸಂದರ್ಭ, ಖಚಿತ ಮಾಹಿತಿ ಮೇರೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖಾಧಿಕಾರಿಗಳು, ಸುಮಾರು 25 ಕೆ.ಜಿ.ಯಷ್ಟು ಕಾಡುಹಂದಿ ಮಾಂಸ ಮತ್ತು ಒಂದು ಕಾಡು ಮೊಲವನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆ ಸಂದರ್ಭ ಆರೋಪಿಗಳಾದ ಅರೆಯೂರು ಗ್ರಾಮದ ಶಾಂತಪ್ಪ ಅವರ ಪುತ್ರ ನವೀನ್ (ಪುಟ್ಟ) ಹಾಗೂ ನೇರಳೆ ಗ್ರಾಮದ ನಂಜಪ್ಪ ಅವರ ಪುತ್ರ ಸುರೇಶ್ ಎಂಬವರುಗಳು ದ್ವಿಚಕ್ರವನ್ನು ಬಿಟ್ಟು ಪರಾರಿಯಾಗಿದ್ದು, ಇವರುಗಳ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ಆರೋಪಿಗಳ ದ್ವಿಚಕ್ರ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಮಾರ್ಗದರ್ಶನದಲ್ಲಿ ಡಿಆರ್‍ಎಫ್‍ಓ ಮಹದೇವ ನಾಯಕ, ಅರಣ್ಯ ರಕ್ಷಕರಾದ ಭರಮಪ್ಪ, ಅರಣ್ಯ ವೀಕ್ಷಕ ಶ್ರೀಕಾಂತ್, ಚಾಲಕ ಸಂದೀಪ್ ಭಾಗವಹಿಸಿದ್ದರು.