ಸೋಮವಾರಪೇಟೆ, ಡಿ. 14: ಸಮೀಪದ ಕುಸುಬೂರು ಗ್ರಾಮದ ಮೊಗೇರ ಸೇವಾ ಸಮಾಜದ ವತಿಯಿಂದ ಹಾಕಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಬಳಗುಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮತ್ತು ಸಾಧನೆಗೆ ಕಾರಣರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಸೋಮವಾರಪೇಟೆ ತಾಲೂಕು ಮೊಗೇರ ಸೇವಾ ಸಮಾಜದ ಅಧ್ಯಕ್ಷ ದಾಮೋದರ್ ಮಾತನಾಡಿ, ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವದು ಹೆಮ್ಮೆಯ ವಿಷಯ ಎಂದರು.

ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಪಟ್ಟಣ ಪಂಚಾಯಿತಿ ಸದಸ್ಯ ಪಿ.ಕೆ. ಚಂದ್ರು ಮಾತನಾಡಿ, ಮೊಗೇರ ಸಮಾಜ ಬಾಂಧವರು ಕೂಲಿ ಮತ್ತು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದರು, ಮಕ್ಕಳು ಶೈಕ್ಷಣಿಕವಾಗಿ ಇನ್ನಷ್ಟು ಸಾಧನೆ ಮಾಡಬೇಕು. ಕ್ರೀಡೆಯಲ್ಲಿ ವಿಫುಲ ಅವಕಾಶಗಳಿದ್ದು, ತಮ್ಮ ಪ್ರತಿಭೆಯ ಮೂಲಕ ಸಾಧನೆ ತೋರಬೇಕು ಎಂದು ಕಿವಿಮಾತು ಹೇಳಿದರು.

ಹರಿಯಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಬಳಗುಂದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಜೆ., ಪೊನ್ನಂಪೇಟೆಯಲ್ಲಿ ನಡೆದ ರಾಜ್ಯಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ರಶ್ಮಿ ಎಂ., ಹಾಸನದಲ್ಲಿ ನಡೆದ ವಿಭಾಗ ಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಮಮತಾ ಎಲ್. ಸೇರಿದಂತೆ, ಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲಾ ಹಾಗೂ ದೈಹಿಕ ಶಿಕ್ಷಕ ರಮೇಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಸುಬೂರು ಗ್ರಾಮದ ಮೊಗೇರ ಸಮಾಜದ ಅಧ್ಯಕ್ಷ ದಿನೇಶ್ ವಹಿಸಿದ್ದರು.

ಸೋಮವಾರಪೇಟೆ ತಾಲೂಕು ಮೊಗೇರ ಸೇವಾ ಸಮಾಜದ ಉಪಾಧ್ಯಕ್ಷ ರಾಮಚಂದ್ರ, ಕುಸುಬೂರು ಗ್ರಾಮ ಶಾಖೆಯ ಮಾಜಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.