ಮಡಿಕೇರಿ, ಡಿ. 15: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು, ಮುಂದಿನ ದಿನಗಳಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನ ನಡೆಸಲು ಚಿಂತನೆ ಹರಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಂ ಹೇಳಿದರು.

ಅಕಾಡೆಮಿ ಸ್ಥಾಪನೆಯಾದ ದಿನವಾದ ಇಂದು ಕೊಡಗು ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಅರೆಭಾಷೆ ಸೌಹಾರ್ದ ದಿನಾಚರಣೆ ಯಲ್ಲಿ ಮಾತನಾಡಿದ ಅವರು, ಅಕಾಡೆಮಿ ಸ್ಥಾಪನೆಯಾಗಿ ಇಂದಿಗೆ 7 ವರ್ಷಗಳಾಗಿದ್ದು, ತಮ್ಮ ಅಧಿಕಾರಾವಧಿಯ ಆಡಳಿತ ಮಂಡಳಿ ರಚನೆಯಾಗಿ ಇಂದಿಗೆ ಒಂದು ವರ್ಷ ಪೂರೈಸಿದೆ. ಒಂದು ವರ್ಷದ ಅವಧಿಯಲ್ಲಿ ಚುನಾವಣೆ, ಪ್ರಾಕೃತಿಕ ವಿಕೋಪದ ನಡುವೆಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ಮಂಗಳೂರು ವಿವಿಯ ಕನ್ನಡ ಪಠ್ಯದಲ್ಲಿ ಅರೆಭಾಷೆ ಕವನವೊಂದನ್ನು ಸೇರ್ಪಡೆ ಮಾಡಿರುವದು ಅಕಾಡೆಮಿಯ ಸಾಧನೆಯಾಗಿದೆ ಎಂದು ಹೇಳಿದರು.

ಕೊಡಗು ಹಾಗೂ ಸುಳ್ಯ ವ್ಯಾಪ್ತಿಯ ಗ್ರಾ.ಪಂ.ಗಳ ಗ್ರಂಥಾಲಯ ಗಳಿಗೆ ಅರೆಭಾಷೆ ಪುಸ್ತಕಗಳನ್ನು ನೀಡಿ ಭಾಷೆಯ ಬೆಳವಣಿಗೆಗೆ ಉತ್ತೇಜನ ನೀಡಲಾಗುತ್ತಿದೆ. ಸಾಕಷ್ಟು ಮಂದಿ ಅರೆಭಾಷೆ ಸಾಹಿತಿಗಳಿದ್ದು, ಮುಂದಿನ ದಿನಗಳಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನ ಏರ್ಪಡಿಸುವದರೊಂದಿಗೆ ಸಾಹಿತ್ಯಕ್ಕೆ (ಮೊದಲ ಪುಟದಿಂದ) ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಈಗಾಗಲೇ ಫೆಲೋಶಿಫ್ ನೀಡಲು ಅರ್ಜಿ ಆಹ್ವಾನಿಸಿದ್ದು, ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರೆಭಾಷೆ ಅಧ್ಯಯನ ಪೀಠ ಹಾಗೂ ಅರೆಭಾಷೆ ಕಲಾ ಗ್ರಾಮ ಸ್ಥಾಪನೆ ಅಕಾಡೆಮಿಯ ಉದ್ದೇಶವಾಗಿದೆ. ಒಟ್ಟು 49 ಅರೆಭಾಷೆ ಸಂಘಟನೆಗಳಿದ್ದು, ಅಕಾಡೆಮಿಯ ಕಾರ್ಯ ಚಟುವಟಿಕೆಗಳಿಗೆ ಕೈಜೋಡಿಸುವಂತೆ ಕೋರಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಸೌಹಾರ್ದ ಸಮ್ಮೇಳನವೆಂದರೆ ಎಲ್ಲರೂ ಜಾತಿ, ಮತ, ಬೇಧವಿಲ್ಲದೆ ಬೆರೆಯುವಂತದ್ದು, ಆದರೆ, ಇಂದಿನ ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರುಗಳೇ ಕಾಣುತ್ತಿಲ್ಲ. ಸದಸ್ಯರುಗಳು ಹೆಚ್ಚಿನ ಸಹಕಾರ ನೀಡಬೇಕೆಂದು ಹೇಳಿದರು. ಚಿಂತಕರು, ಬುದ್ಧಿಜೀವಿಗಳೆನಿಸಿ ಕೊಂಡವರು ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಉದಾಹರಣೆ ಸಹಿತ ವಿವರಿಸಿದ ಅವರು, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯವನ್ನು ಸಮೃದ್ಧಗೊಳಿಸುವಲ್ಲಿ ಅಕಾಡೆಮಿಯ ಪಾತ್ರ ಮಹತ್ತರವಾದುದೆಂದು ಹೇಳಿದರು.

ದಿಕ್ಸೂಚಿ ಭಾಷಣ ಮಾಡಿದ ಚಿಂತಕ ಗೋಪಾಲ್ ಪೆರಾಜೆ ಅವರು, ಹಲವಾರು ಭಾಷೆ, ಸಂಸ್ಕøತಿ ವಿನಾಶದ ಅಂಚಿನಲ್ಲಿದ್ದು, ಅವುಗಳನ್ನು ಪೋಷಿಸಿ, ಬೆಳೆಸುವ ನಿಟ್ಟಿನಲ್ಲಿ ಸರಕಾರ ಅಕಾಡೆಮಿಗಳನ್ನು ಸ್ಥಾಪನೆ ಮಾಡಿದೆ. ಇದರ ಉದ್ದೇಶ ಈಡೇರುವಂತಾಗಬೇಕೆಂದರು. ಅಕಾಡೆಮಿ ಅಧ್ಯಯನದೊಂದಿಗೆ ಭಾಷೆ, ಸಾಹಿತ್ಯ, ಸಂಸ್ಕøತಿಯ ದಾಖಲೀಕರಣ ಮಾಡುವ ಕಾರ್ಯದತ್ತ ಮುಂದಾಗಬೇಕು, ತಜ್ಞರನ್ನು ಒಡಗೂಡಿಸಿ, ಚರ್ಚಿಸಿ ಕಾರ್ಯೋನ್ಮುಖ ವಾಗಬೇಕು; ಅಕಾಡೆಮಿಯೊಂದಿಗೆ ಸಮಾಜಗಳು, ಸಂಘಟನೆಗಳು ಕೈಜೋಡಿಸಬೇಕೆಂದರು. ಗೌಡ ಸಮುದಾಯಕ್ಕೆ ಲೋಕದೃಷ್ಟಿಯಿದ್ದು, ಇದನ್ನು ಸಮಾಜದ ಮುಂದೆ ಇಡಬೇಕು, ಸ್ವಾತಂತ್ರ್ಯ ಹೋರಾಟದಲ್ಲಿನ ಅರೆಭಾಷಿಕರ ಹೋರಾಟದ ಬಗ್ಗೆ ಪೀಳಿಗೆಗೆ ಪರಿಚಯಿಸುವಂತಾಗಬೇಕೆಂದು ಹೇಳಿದರು. ಪ್ರಸ್ತುತ ಅಕಾಡೆಮಿ ಮಗುವಿನ ಅವಸ್ಥೆಯಲ್ಲಿದ್ದು, ಇದರ ಪಾಲನೆ, ಪೋಷಣೆ ಅತ್ಯಗತ್ಯವೆಂದು ಹೇಳಿದರು. ಅಕಾಡೆಮಿ ಸ್ಥಾಪಕಾಧ್ಯಕ್ಷ ಎನ್.ಎಸ್. ದೇವಿಪ್ರಸಾದ್ ಅವರು, ಅಕಾಡೆಮಿಯನ್ನು ಮುಂದುವರಿಸಲು ಎಲ್ಲರ ಸಹಕಾರ ಅತ್ಯಗತ್ಯ; ಈ ಹಿಂದೆ ಸೇವೆ ಸಲ್ಲಿಸಿದ ಸದಸ್ಯರುಗಳು ತಮ್ಮ ಅವಧಿ ಮುಗಿಯಿತೆಂದು ಸುಮ್ಮನಿರದೆ ಅಕಾಡೆಮಿ ಚಟುವಟಿಕೆಗಳಿಗೆ ಸಹಕಾರ ನೀಡಬೇಕೆಂದು ಹೇಳಿದರು.

ನಿಕಟ ಪೂರ್ವ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಕಳೆದ ಮೂರು ವರ್ಷದ ಅವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ ಸಾಕಷ್ಟು ಕಾರ್ಯಗಳಾಗಿವೆ. ಇನ್ನೂ ಮುಂದಕ್ಕೂ ಸಾಹಿತ್ಯ, ಸಂಸ್ಕøತಿಗೆ ಆದ್ಯತೆ ನೀಡುವದರೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ಮಾಡಿದರು. ಅರೆಭಾಷೆ ಅಕಾಡೆಮಿ ತಡವಾಗಿ ರಚನೆಯಾಗಿದ್ದು, ಇತರ ಅಕಾಡೆಮಿಗಳೊಂದಿಗೆ ಪೈಪೋಟಿ ನೀಡಬೇಕಾಗಿದೆ. ಎಲ್ಲ ಸಂಘಟನೆಗಳ ಸಹಕಾರ ಪಡೆದುಕೊಂಡು ಕಾರ್ಯೋನ್ಮುಖರಾಗುವಂತೆ ಹೇಳಿದರು. ಅಕಾಡೆಮಿ ರಚನೆಯಾದ ಬಳಿಕ ಅರೆಭಾಷೆ ಸಾಕಷ್ಟು ಬೆಳವಣಿಗೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಅಕಾಡೆಮಿ ರಿಜಿಸ್ಟಾರ್ ಆಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಉಮ್ಮರಬ್ಬ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸರಕಾರಿ ನೌಕರನಾಗಿ ತನ್ನ ಕರ್ತವ್ಯ ನಿಭಾಯಿಸಿದ್ದೇನೆ. ಪ್ರೀತಿಯಿಂದ ಸನ್ಮಾನಿಸಿದಕ್ಕಾಗಿ ಅಬಾರಿಯಾಗಿದ್ದೇನೆ ಎಂದರು. ಭಾಷೆ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು, ಮಾಡಿದ ತಪ್ಪನ್ನು ಅರಿತು ತಿದ್ದುಕೊಂಡು ಮುನ್ನಡೆಯಬೇಕು, ಅರೆಭಾಷೆ ನಮ್ಮೆಲ್ಲರ ಭಾಷೆಯಾಗಿದ್ದು, ಬೆಳವಣಿಗೆಗೆ ಎಲ್ಲರೂ ಸಹಕರಿಸಬೇಕೆಂದು ಹೇಳಿದರು.

ನಂತರದಲ್ಲಿ ನೆರೆದಿದ್ದ ಸಮಾಜಗಳ ಪ್ರಮುಖರು ಸಲಹೆ - ಸೂಚನೆಗಳನ್ನು ನೀಡಿದರು. ಅಕಾಡೆಮಿ ಸದಸ್ಯೆ ಕಡ್ಲೇರ ತುಳಸಿ ಮೋಹನ್ ಪ್ರಾರ್ಥಿಸಿದರೆ, ಬಾರಿಯಂಡ ಜೋಯಪ್ಪ ನಿರೂಪಿಸಿದರು. ಕಾನೆಹಿತ್ಲು ಮೊಣ್ಣಪ್ಪ ಸ್ವಾಗತಿಸಿದರೆ, ಬೇಕಲ್ ದೇವರಾಜ್ ವಂದಿಸಿದರು.