ಶ್ರೀಮಂಗಲ, ಡಿ. 15: ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಿಂಡುಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಇಲ್ಲಿನ ಬೆಳೆಗಾರರ ತೋಟ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಮಾಡಿದ್ದು, ಕಾಡಾನೆಗಳನ್ನು ಕೂಡಲೇ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಮಾಡಬೇಕು. ಅಲ್ಲದೆ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ಕುಟ್ಟ ಗ್ರಾಮದ ಪೂಜೆಕಲ್ಲುವಿನ ಗುರುಕೃಪ ತೋಟದ ಎಸ್.ಎನ್. ಮಹದೇವಪ್ಪ ಅವರ ತೋಟಕ್ಕೆ ಕಾಡಾನೆ ಹಿಂಡುಗಳು ನುಗ್ಗಿ ಬಾರೀ ಪ್ರಮಾಣದಲ್ಲಿ ಫಸಲು ಬರುವ ಅಡಿಕೆ ಮತ್ತು ಕಾಫಿ ಗಿಡಗಳನ್ನು ದ್ವಂಸಮಾಡಿವೆ.
ಐದು ವರ್ಷದ 550 ಅಡಿಕೆ ಗಿಡ ಮತ್ತು 20 ವರ್ಷ ಮೇಲ್ಪಟ್ಟ ಫಸಲು ಬರುವಂತಹ ಸುಮಾರು 60 ಅಡಿಕೆ ಮರವನ್ನು ಬುಡ ಸಹಿತ ಕಾಡಾನೆ ಹಿಂಡುಗಳು ಧÀ್ವಂಸಮಾಡಿದೆ. ಅಲ್ಲದೆ 20 ವರ್ಷ ಮೇಲ್ಪಟ್ಟ ಸುಮಾರು 150 ಕಾಫಿ ಗಿಡಗಳನ್ನು ಸಹ ಮುರಿದು ನಷ್ಟ ಮಾಡಿದೆ. ಕುಟ್ಟ ದೇವರಕಾಡಿನಲ್ಲಿ ಸೇರಿಕೊಂಡಿರುವ ಕಾಡಾನೆ ಹಿಂಡುಗಳು ಸಂಜೆ ಯಾಗುತ್ತಿದ್ದಂತೆ ಮರಿ ಸಹಿತ ಬೆಳೆಗಾರರ ತೋಟಗಳಿಗೆ ಲಗ್ಗೆ ಇಡುತ್ತಿವೆ.
ಈಗಾಗಲೇ ಅತಿವೃಷ್ಟಿಯಿಂದ ಪ್ರಮುಖ ಬೆಳೆಗಳು ನೆಲಕಚ್ಚಿದ್ದು ಸಂಕಷ್ಟದಲ್ಲಿರುವ ಸಮಂiÀiದಲ್ಲಿ ಕಾಡಾನೆ ಹಿಂಡುಗಳು ಬೆಳೆ ನಷ್ಟ ಮಾಡುತ್ತಿದ್ದು ಈ ಭಾಗದ ಬೆಳೆಗಾರರು ಅಸಹಾಯಕರಾಗುವಂತೆ ಮಾಡಿದೆ. ಅಡಿಕೆ ಹಾಗೂ ಕಾಫಿ ಮರ ಒಮ್ಮೆ ಕಾಡಾನೆ ಧಾಳಿಗೆ ತುತ್ತಾಗಿ ನೆಲಕಚ್ಚಿದರೆ ಮತ್ತೆ ಅಂತಹ ಅಡಿಕೆ ಹಾಗೂ ಕಾಫಿ ಫಸಲನ್ನು ತೆಗೆಯಲು ಬಹಳಷ್ಟು ವರ್ಷಗಳೇ ಬೇಕಾಗುತ್ತದೆ ಎಂದು ಬೆಳೆಗಾರರು ತಮ್ಮ ನೋವು ತೋಡಿಕೊಂಡರು. ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು. ಕಾಡಾನೆ ಹಿಂಡುಗಳನ್ನು ಮರಳಿ ಅರಣ್ಯಕ್ಕೆ ಅಟ್ಟಲು ಕಾರ್ಯಾಚರಣೆ ಕೈಗೊಳ್ಳಬೇಕು. ಅರಣ್ಯದಿಂದ ಗ್ರಾಮಕ್ಕೆ ಕಾಡಾನೆ ಹಿಂಡುಗಳು ನುಸುಳುವ ಜಾಗವನ್ನು ಗುರುತಿಸಿ ಅದನ್ನು ತಡೆಗಟ್ಟುವ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಕಾಡಾನೆ ನುಸುಳು ತಡೆಗೆ ಶಾಶ್ವತ ಯೋಜನೆ ರೂಪಿಸಬೇಕೆಂದು ಕುಟ್ಟದ ಬೆಳೆಗಾರ ಎಸ್. ಎನ್. ಮಹದೇವಪ್ಪ ಒತ್ತಾಯಿಸಿದ್ದಾರೆ.