ವೀರಾಜಪೇಟೆ, ಡಿ. 16: ಯುವಜನತೆಯನ್ನು ಒಂದೇ ಸೂರಿನಡಿಯಲ್ಲಿ ಕೇಂದ್ರೀಕರಿಸುವ ಶಕ್ತಿ ಕ್ರೀಡೆಗೆ ಮಾತ್ರ ಇದೆ ಎಂದು ಪಟ್ಟಣ ಪಂಚಾಯಿತಿ ನೂತನ ಸದಸ್ಯೆ ಅನಿತ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ನೆಹರು ನಗರದ ನವಜ್ಯೋತಿ ಯುವಕ ಸಂಘದ 29ನೇ ವಾರ್ಷಿಕೋತ್ಸವ ಅಂಗವಾಗಿ ತಾಲೂಕು ಮೈದಾನದಲ್ಲಿ ಅಯೋಜಿಸ ಲಾಗಿದ್ದ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಯುವಜನತೆಯು ಕ್ರೀಡೆಗಳಲ್ಲಿ ಭಾಗವಹಿಸದೆ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಿನವಾಗಿರುವದು ಬೇಸರದ ಸಂಗತಿ ಎಂದು ಹೇಳಿದರು.
ಪಂದ್ಯಾಟ ಉದ್ಘಾಟನೆ ಮಾಡಿ ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಬಿ. ಹರ್ಷವರ್ಧನ್, ಯುವಕ ಸಂಘಗಳು ಕ್ರೀಡೆಗಳಲ್ಲಿ ಭಾಗವಹಿಸು ವದು ಅತಿ ಮುಖ್ಯ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ಯನ್ನು ಸಂಘದ ಉಪಾಧ್ಯಕ್ಷ ಬಿ.ಜಿ. ಮಣಿಕಂಠ ವಹಿಸಿದ್ದರು. ಪಟ್ಟಣ ಪಂಚಾಯಿತಿ ಸದಸ್ಯ ಎಂ.ಕೆ. ಅಬ್ದುಲ್ ಜಲೀಲ್ ಮಾತನಾಡಿದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಹೆಚ್.ಪಿ. ಮಹದೇವ (ಸುಭಾಶ್), ಟಿ.ಕೆ. ಯಶೋಧ, ಬಿ.ವಿ. ಹೇಮಂತ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.
ಪ್ರಥಮ ಪಂದ್ಯಾಟವನ್ನು ಉದ್ಯಮಿ ಅಲ್ತಾಫ್ ಉದ್ಘಾಟಿಸಿದರು. ಪ್ರಥಮ ಪಂದ್ಯಾಟವು ಸಿ.ಸಿ.ಬಿ.ಎ. ವೀರಾಜ ಪೇಟೆ ಮತ್ತು ಬ್ಲೂ ಟೈಗರ್ಸ್ ಚೆಟ್ಟಳ್ಳಿ ತಂಡಗಳ ಮಧ್ಯೆ ನಡೆದು ಉಭಯ ತಂಡಗಳು ಗೋಲು ದಾಖಲಿಸದೆ ಸಮಬಲ ಸಾಧಿಸಿದವು. ತಂಡಗಳಿಗೆ ಪೆನಾಲ್ಟಿ ಸ್ಟ್ರೋಕ್ ನೀಡಲಾಗಿ ಸಿ.ಸಿ.ಬಿ.ಎ. ತಂಡವು 3-2 ಗೋಲು ಗಳಿಂದ ಚೆಟ್ಟಳ್ಳಿ ತಂಡವನ್ನು ಮಣಿಸಿತು.