ಮಡಿಕೇರಿ, ಡಿ. 15: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಎಮ್ಮೆಮಾಡು, ಸಂಪಾಜೆ, ಮರಗೋಡು ಮತ್ತು ವೀರಾಜಪೇಟೆ ತಾಲೂಕಿನ ಮಾಯಮುಡಿ, ಬಿಳುಗುಂದ ಹಾಗೂ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.
ತಾ. 17 ರಂದು ಜಿಲ್ಲಾಧಿಕಾರಿ ಅವರು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ತಾ. 20 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ತಾ. 21 ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ತಾ. 24 ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಜನವರಿ, 2 ರಂದು ಮತದಾನದ ಅವಶ್ಯವಿದ್ದರೆ ಮತದಾನವು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಜನವರಿ 3 ರಂದು ಮರು ಮತದಾನದ ಅವಶ್ಯವಿದ್ದರೆ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಜನವರಿ 4 ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾಯ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308 ಎಸಿ ಪ್ರಕಾರ ಚುನಾವಣಾ ಮಾದರಿ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತಾ. 17 ರಿಂದ ಜನವರಿ 4 ರವರೆಗೆ ಜಾರಿಯಲ್ಲಿರುತ್ತದೆ. ಅಲ್ಲದೇ ಗ್ರಾಮ ಪಂಚಾಯಿತಿಯ ಯಾವದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೇ ಚುನಾವಣೆ ಪ್ರಕ್ರಿಯೆ ಮುಂದುವರೆಯಲಾಗದೆ ಇರುವಂತಹ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕøತ / ನಾಮಪತ್ರ ಹಿಂತೆಗೆತ ಇತ್ಯಾದಿ ಕಾರಣಗಳಿಂದ ಯಾವದೇ ಅಭ್ಯರ್ಥಿಯು ಕಣದಲ್ಲಿರದೆ ಆ ಗ್ರಾಮ ಪಂಚಾಯಿತಿಯ ಯಾವದೇ ಸ್ಥಾನಕ್ಕೂ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾಮ ಪಂಚಾಯಿತಿಯಲ್ಲಿನ ಚುನಾವಣೆ ಘೋಷಿಸಿರುವ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿದ್ದ, ಆಯ್ಕೆಯಾದ ಅಭ್ಯರ್ಥಿಯ ಫಲಿತಾಂಶವನ್ನು ಚುನಾವಣಾಧಿಕಾರಿಯು ಘೋಷಿಸಿದ್ದಲ್ಲಿ ಅಂತಹ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀತಿಸಂಹಿತೆ ಜಾರಿಯಲ್ಲಿರುವದು ತಕ್ಷಣದಿಂದ ನಿಂತುಹೋಗುತ್ತದೆ.
ಮೀಸಲಾತಿ ವಿವರ ಇಂತಿದೆ: ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ಮತ್ತು ಕ್ಷೇತ್ರಗಳ ವಿವರ: ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾ,ಪಂ. ಎಮ್ಮೆಮಾಡು-1 (1 ಸ್ಥಾನ) ಪರಿಶಿಷ್ಟ ಪಂಗಡ (ಮಹಿಳೆ), ಎಮ್ಮೆಮಾಡು-2 (1 ಸ್ಥಾನ) ಪರಿಶಿಷ್ಟ ಜಾತಿ (ಮಹಿಳೆ, ಸಂಪಾಜೆ ಗ್ರಾ.ಪಂ. ಸಂಪಾಜೆ-1 (1 ಸ್ಥಾನ) ಹಿಂದುಳಿದ ವರ್ಗ(ಅ), ಮರಗೋಡು ಗ್ರಾ.ಪಂ. ಮರಗೋಡು-2 (1 ಸ್ಥಾನ) ಸಾಮಾನ್ಯ, ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ ಗ್ರಾ.ಪಂ. ನೆಲ್ಲಿಹುದಿಕೇರಿ-1 (1 ಸ್ಥಾನ) ಸಾಮಾನ್ಯ, ನೆಲ್ಲಿಹುದಿಕೇರಿ-3 (1 ಸ್ಥಾನ) ಪರಿಶಿಷ್ಟ ಪಂಗಡ(ಮಹಿಳೆ), ವೀರಾಜಪೇಟೆ ತಾಲೂಕಿನ ಮಾಯಮುಡಿ ಗ್ರಾ.ಪಂ. ಮಾಯಮು-3 (1 ಸ್ಥಾನ) ಸಾಮಾನ್ಯ, ಬಿಳುಗುಂದ ಗ್ರಾ.ಪಂ. ಬಿಳುಗುಂದ-1, 2 (1 ಸ್ಥಾನ) ಪರಿಶಿಷ್ಟ ಜಾತಿಗೆ ಮೀಸಲಾಗಿದೆ.
ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳ ನೇಮಕ: ಪಂಚಾಯಿತಿಗಳ ಉಪ ಚುನಾವಣೆ ಸಂಬಂಧ ಚುನಾವಣಾಧಿಕಾರಿಗಳ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾ.ಪಂ. ಚುನಾವಣಾಧಿಕಾರಿಯಾಗಿ ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಜೆ. ದಿವಾಕರ್, ಸಹಾಯಕ ಚುನಾವಣಾಧಿಕಾರಿಯಾಗಿ ಮಡಿಕೇರಿ ತಾಲೂಕು ನಾಪೋಕ್ಲು ಹೋಬಳಿಯ ಕಂದಾಯ ಪರಿವೀಕ್ಷಕ ಜೆ.ಡಿ. ರಾಮಯ್ಯ, ಸಂಪಾಜೆ ಗ್ರಾ.ಪಂ. ಚುನಾವಣಾಧಿಕಾರಿಯಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಸುರೇಶ್ ಬೆಳ್ಳಣ್ಣನವರ್, ಸಹಾಯಕ ಚುನಾವಣಾಧಿಕಾರಿಯಾಗಿ ಜಿಲ್ಲಾ ಸಂಖ್ಯಾ ಮತ್ತು ಸಂಗ್ರಹಣಾಧಿಕಾರಿಗಳ ಕಚೇರಿಯ ಸಹಾಯಕ ಸಾಂಖ್ಯಿಕ ಅಧಿಕಾರಿ ಟಿ.ವೆಂಕಟೇಶ್, ಮರಗೋಡು ಗ್ರಾ.ಪಂ. ಚುನಾವಣಾಧಿಕಾರಿಯಾಗಿ ಮರಗೋಡು ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಪಿ.ಟಿ. ಶಾಜಿ, ಸಹಾಯಕ ಚುನಾವಣಾಧಿಕಾರಿಯಾಗಿ ಮರಗೋಡು ಭಾರತಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಶಿವಪ್ರಸಾದ್, ವೀರಾಜಪೇಟೆ ತಾಲೂಕಿನ ಮಾಯಮುಡಿ ಗ್ರಾ.ಪಂ.ಗೆ ಚುನಾವಣಾಧಿಕಾರಿಯಾಗಿ ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಕೆ.ಜಿ.ಅಶ್ವಿನಿ ಕುಮಾರ್, ಸಹಾಯಕ ಚುನಾವಣಾಧಿಕಾರಿಯಾಗಿ ಪೊನ್ನಂಪೇಟೆ ಹೋಬಳಿಯ ಕಂದಾಯ ಪರಿವೀಕ್ಷಕ ಸಿ.ಯು. ರಾಧಾಕೃಷ್ಣ, ಬಿಳುಗುಂದ ಗ್ರಾ.ಪಂ. ಸರ್ವೋದಯ ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಚ್.ಆರ್. ಗಿರೀಶ್, ಅಮ್ಮತ್ತಿ ಒಂಟಿಯಂಗಡಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎ.ವಿ. ಮಂಜುನಾಥ್.
ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ ಗ್ರಾ.ಪಂ.ಗೆ ಚುನಾವಣಾಧಿಕಾರಿ ಸೋಮವಾರಪೇಟೆ ತೋಟಗಾರಿಕೆ ಅಧಿಕಾರಿ ಎಚ್.ಪಿ. ಗಣೇಶ್, ಸಹಾಯಕ ಚುನಾವಣಾಧಿಕಾರಿಯಾಗಿ ಸೋ.ಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರ.ದ.ಸ. ಎಚ್.ಪಿ. ರಾಜೇಶ್.
ಸಂಬಂಧಪಟ್ಟ ಗ್ರಾ.ಪಂ.ಗಳ ಕಚೇರಿಯಲ್ಲಿ ತಾ. 17 ರಿಂದ 20ರ ವರೆಗೆ ಚುನಾವಣಾಧಿಕಾರಿಗಳಿಗೆ/ ಸಹಾಯಕ ಚುನಾವಣಾಧಿಕಾರಿಗಳಿಗೆ ನಾಮಪತ್ರಗಳನ್ನು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗೆ ಸಲ್ಲಿಸಬಹುದು. ಗ್ರಾಮ ಪಂಚಾಯಿತಿಗಳ ಮತಪತ್ರದಲ್ಲಿ ನೋಟಾ ಅವಕಾಶ ಇರುವದಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.