ವೀರಾಜಪೇಟೆ, ಡಿ. 15: ಯುವ ಶಕ್ತಿಗಳನ್ನು ಒಂದೆಡೆ ಒಗ್ಗೂಡಿಸಲು ಕ್ರೀಡೆ ಕಾರಣವಾಗಲಿದೆ. ಯುವಕರು ಕ್ರೀಡೆಯಲ್ಲಿ ಭಾಗವಹಿಸುವದರಿಂದ ಮಾನಸಿಕ ದೃಢತೆಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಬಿ.ಹರ್ಷವರ್ಧನ್ ಹೇಳಿದರು.

ಇಲ್ಲಿನ ನೆಹರು ನಗರದ ನವಜ್ಯೋತಿ ಯುವಕ ಸಂಘದಿಂದ 29ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ತಾಲೂಕು ಮೈದಾನದಲ್ಲಿ ಹಮ್ಮಿಕೊಂಡಿದ್ದ ಮೂರನೇ ವರ್ಷದ ಕಾಲ್ಚೆಂಡು ಪಂದ್ಯಾಟದ ಅತಿಥಿಯಾಗಿ ಭಾಗವಹಿಸಿದ್ದ ಹರ್ಷವರ್ಧನ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಅತಿಥಿಯಾಗಿ ಭಾಗವಹಿಸಿದ್ದ ಪಟ್ಟಣ ಪಂಚಾಯಿತಿಯ ಸದಸ್ಯೆ ಅನಿತಾ ಕುಮಾರ್ ಮಾತನಾಡಿ ಯುವ ಜನತೆಯನ್ನು ಒಂದೇ ಸೂರಿನಡಿ ಸೇರಿಸುವ ಶಕ್ತಿ ಕ್ರೀಡೆಗಿದೆ ಎಂದರು. ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಪಟ್ಟಣ ಪಂಚಾಯಿತಿಯ ಸದಸ್ಯ ಎಂ.ಕೆ.ಅಬ್ದುಲ್ ಜಲೀಲ್, ಫುಟ್‍ಬಾಲ್‍ನ ಹಿರಿಯ ಕ್ರೀಡಾಪಟು ಅಲ್ತಾಫ್ ಹಾಗೂ ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷ ಬಿ.ಜಿ.ಮಣಿಕಂಠ ಮಾತನಾಡಿದರು.

ಸಂಘದ ಅಧ್ಯಕ್ಷ ಜನಾರ್ಧನ ಮೂರ್ತಿ, ಪ್ರಧಾನ ಕಾರ್ಯದರ್ಶಿ ಎನ್.ರವಿ, ಕೋಶಾಧಿಕಾರಿ ಕೆ.ಎನ್. ಸುನಿಲ್, ನಿರ್ದೇಶಕರುಗಳಾದ ಜೂಡಿವಾಜ್, ಕೆ.ಕೆ.ಪ್ರಕಾಶ್ ಮತ್ತಿತರರು ಹಾಜರಿದ್ದರು. ಅತಿಥಿಗಳಾಗಿ ಉದ್ಯಮಿ ಹೇಮಂತ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ವಿ.ಆರ್.ರಜನಿಕಾಂತ್, ಟಿ.ಕೆ. ಯಶೋಧ, ಎಚ್.ಪಿ. ಮಹದೇವ, ಮಹಮ್ಮದ್ ರಾಫಿ ಭಾಗವಹಿಸಿದ್ದರು. ಜಿಲ್ಲಾ ಮಟ್ಟದ ಫುಟ್‍ಬಾಲ್ ಪಂದ್ಯಾಟವು ಸಿ.ಸಿ.ಬಿ.ಎ. ಹಾಗೂ ಚಟ್ಟಳ್ಳಿ ತಂಡಗಳ ನಡುವೆ ನಡೆದು ಪೆನಾಲ್ಟಿ ಸ್ಟ್ರೋಕ್‍ನಲ್ಲಿ 3-2 ಗೋಲುಗಳಿಂದ ಸಿ.ಸಿ.ಬಿ.ಎ.ತಂಡ ಜಯ ಸಾಧಿಸಿತು. ಫುಟ್‍ಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ ತಾ. 16ರಂದು (ಇಂದು) ಅಪರಾಹ್ನ 5 ಗಂಟೆಗೆ ನಡೆಯಲಿದೆ.