ಮೂರ್ನಾಡು, ಡಿ. 15: ಸಾಧ್ಯತೆಗಳನ್ನು ಕಂಡುಕೊಂಡು ಸತತ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಲು ಸಾಧ್ಯ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ ಮೇಜರ್ ಬಿದ್ದಂಡ ನಂಜಪ್ಪ ಹೇಳಿದರು.

ಮರಗೋಡು ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಮೂರ್ನಾಡು ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಈಗಿನ ವಿದ್ಯಾರ್ಥಿಗಳಿಗೆ ರೈತಾಪಿ ಜನಗಳ ಕಷ್ಟ-ನಷ್ಟಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸೇವಿಸುವ ಆಹಾರ ಧಾನ್ಯಗಳು ಎಲ್ಲಿ ಹೇಗೆ ಬೆಳೆಯಲಾಗುತ್ತದೆ ಎಂಬದನ್ನು ತಿಳಿದುಕೊಳ್ಳಲು ರೈತರ ಕೆಲಸ ಕಾರ್ಯಗಳಲ್ಲಿ ಶಿಬಿರಾರ್ಥಿಗಳು ಜೊತೆಗೂಡಬೇಕು ಎಂದರು.

ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಹೆಚ್.ಬಿ. ಬೆಳ್ಯಪ್ಪ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಮತ್ತು ವಿದ್ಯಾಸಂಸ್ಥೆಯ ಕ್ಲೀನ್ ಇಂಡಿಯಾ ಬ್ರಿಗೇಡ್‍ನ ನಿರ್ದೇಶಕ ನಂದೇಟಿರ ರಾಜಾ ಮಾದಪ್ಪ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಶಿಬಿರಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ಸಮಾರಂಭಕ್ಕೆ ಮೊದಲು ಮುಖ್ಯ ಅತಿಥಿಗಳು ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರೆರೆದರು.

ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮರಗೋಡು ಗ್ರಾಮ ಪಂಚಾಯಿತಿ ಸದಸ್ಯ ಮುಕ್ಕಾಟಿರ ಚಿದಂಬರ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನೆರ್ಪಂಡ ಹರ್ಷ ಮಂದಣ್ಣ, ಉಪನ್ಯಾಸಕರಾದ ನಾಟೋಳಂಡ ನವೀನ್, ಕೆ.ಜಿ. ಹರೀಶ್, ಬಿ.ಎಂ. ಕಲ್ಪನಾ, ಸಾದೇರ ದರ್ಶನ್, ಕಂಬೀರಂಡ ಬೋಪಣ್ಣ ಮತ್ತು ಕೆ.ಸಿ. ಅರ್ಪಿತಾ ಉಪಸ್ಥಿತರಿದ್ದರು.