ಗೋಣಿಕೊಪ್ಪ ವರದಿ, ಡಿ. 15: ಸಂತ್ರಸ್ತರ ನೆರವಿಗೆ ಧಾವಿಸದ ಜಿಲ್ಲಾಧಿಕಾರಿಯವರು ಭೂಕುಸಿತ ಸಂತ್ರಸ್ತರ ನೆರವಿಗೆ ಬಂದಿರುವ ಸರ್ಕಾರದ ಪರಿಹಾರ ಹಣವನ್ನು ಬಳಕೆ ಮಾಡುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಆರೋಪಿಸಿದರು.

ಅಮ್ಮತ್ತಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮುಜರಾಯಿ ಇಲಾಖೆ ಹಾಗೂ ದೇವಸ್ಥಾನ ಸಮಿತಿ ವತಿಯಿಂದ 8 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.

ಭೂಕುಸಿತ ಸಂತ್ರಸ್ತರಿಗೆ ಬಂದಿರುವ ಹಣವನ್ನು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಬಳಕೆ ಮಾಡುತ್ತಿಲ್ಲ. ಇದರಿಂದಾಗಿ ಸಂತ್ರಸ್ತರು ಪರಿಹಾರದಿಂದ ವಂಚಿತರಾಗಿದ್ದಾರೆ. ಸುಮಾರು ರೂ. 10 ಕೋಟಿ ಹಣ ಜಿಲ್ಲಾಡಳಿತಕ್ಕೆ ಬಂದಿದ್ದರೂ ಇದನ್ನು ಅನುಷ್ಠಾನಗೊಳಿಸುತ್ತಿಲ್ಲ. ಆದರೂ ಜನರು ಇವರನ್ನು ದಿನಂಪ್ರತಿ ಹೊಗಳುವ ಕೆಲಸ ಮಾಡುತ್ತಿದ್ದಾರೆ, ಜಿಲ್ಲೆಯ ಎಲ್ಲಾ ಶಾಸಕರುಗಳು ಸರ್ಕಾರದ ಸವಲತ್ತು ಒದಗಿಸಲು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ ಎಂದರು.

ದೇವಸ್ಥಾನ ಸಮಿತಿ ಉಪಾಧ್ಯಕ್ಷ ಕುಟ್ಟಂಡ ಪ್ರಿನ್ಸ್ ಗಣಪತಿ ಮಾತನಾಡಿ, ನೂತನವಾಗಿ ನಿರ್ಮಿಸಿರುವ ಸಭಾಂಗಣವನ್ನು ಸಾರ್ವಜನಿಕರ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡಲು ಸಮಿತಿ ನಿರ್ಧರಿಸಿದೆ. ಹಿಂದೂ ಜನತೆ ಒಂದೆಡೆ ಸೇರಲು ಅವಕಾಶ ದೊರೆತಂತಾಗಿದೆ ಎಂದರು.

ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಮಾಚಿಮಂಡ ಮದು, ಕಾರ್ಯದರ್ಶಿ ರವಿ ತಮ್ಮಯ್ಯ, ಖಜಾಂಚಿ ಜಯ ಉತ್ತಪ್ಪ ಉಪಸ್ಥಿತರಿದ್ದರು.