ಸೋಮವಾರಪೇಟೆ, ಡಿ.15: ನಡೆದಾಡುವ ದೇವರೆಂದೇ ಕರೆಯಲ್ಪಡುವ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ಫೇಸ್ಬುಕ್ನಲ್ಲಿ ಮನಿಶ್ ಮಣಿಕಂಠ ಎಂಬಾತ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಈತನ ವಿರುದ್ಧ ಮುಂದಿನ 10 ದಿನಗಳ ಒಳಗೆ ಕಾನೂನು ಕ್ರಮ ಜರುಗಿಸದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟ ಸಂಘಟಿಸುವದಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ. ಕಾಂತರಾಜು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿಯವರು ಚೆನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವದನ್ನು ಪ್ರಸ್ತಾಪಿಸಿ, ಮನಿಶ್ ಮಣಿಕಂಠ ಎಂಬಾತ ಫೇಸ್ಬುಕ್ನಲ್ಲಿ ಶ್ರೀಗಳ ಆರೋಗ್ಯ ಹಾಗೂ ಚಿಕಿತ್ಸೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿರುವದು ಖಂಡನೀಯ ಎಂದರು.
ಸಿದ್ಧಗಂಗಾ ಶ್ರೀಗಳು ತಮ್ಮ ಜೀವನದುದ್ದಕ್ಕೂ ಸಮಾಜದ ಬಡ ಬಗ್ಗರ ಬಗ್ಗೆ ಕರುಣೆ ತೋರಿದವರು. ಹಲವಷ್ಟು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಎಲ್ಲಾ ಧರ್ಮಗಳ ವಿದ್ಯಾರ್ಥಿಗಳಿಗೂ ಅನ್ನ, ಅಕ್ಷರ ದಾಸೋಹ ನೀಡುತ್ತಾ ಬಂದಿರುವ ಶ್ರೀಗಳ ವಿರುದ್ಧ, ಕೆಎಸ್ಆರ್ಟಿಸಿ ಚಾಲಕನಾಗಿರುವ ವ್ಯಕಿಯೋರ್ವ ಫೇಸ್ಬುಕ್ನಲ್ಲಿ ನಿಂದನಾತ್ಮಕ ಬರಹ ಪ್ರಕಟಿಸಿರುವದು ಶ್ರೀಗಳ ಅಸಂಖ್ಯಾತ ಭಕ್ತರಿಗೆ ನೋವು ತರಿಸಿದೆ ಎಂದು ತಿಳಿಸಿದರು.
ಈ ಬಗ್ಗೆ ಮಡಿಕೇರಿ, ಶನಿವಾರಸಂತೆ, ಸೋಮವಾರಪೇಟೆ, ಕುಶಾಲನಗರ ಹಾಗೂ ಪಿರಿಯಾಪಟ್ಟಣ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದ್ದರೂ ಇದುವರೆಗೆ ಯಾವದೇ ಕ್ರಮ ಕೈಗೊಂಡಿಲ್ಲ. ಮುಂದಿನ 10 ದಿನಗಳ ಒಳಗೆ ಕಾನೂನು ಕ್ರಮ ಜರುಗಿಸದಿದ್ದಲ್ಲಿ ವೀರಶೈವ ಮಹಾ ಸಭಾದಿಂದ ಹೋರಾಟ ಸಂಘಟಿಸಲಾಗುವದು ಎಂದು ಕಾಂತರಾಜ್ ಎಚ್ಚರಿಸಿದರು.
ಗೋಷ್ಠಿಯಲ್ಲಿ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ, ಪ್ರಮುಖರುಗಳಾದ ಬಸವರಾಜು, ಎಸ್. ಮಹೇಶ್, ಶಿವಣ್ಣ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗೆ ಮನವಿ: ಪ್ರಕರಣದ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ವೀರಶೈವ ಸಮಾಜದ ವತಿಯಿಂದ ಜಿಲ್ಲಾಧಿಕಾರಿ ಶ್ರೀವಿದ್ಯಾರವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಯವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ತಂತ್ರಜ್ಞಾನದ ಕಾನೂನಿನಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಅವಕಾಶವಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರುವದಾಗಿ ತಿಳಿಸಿದರು.