ಮಡಿಕೇರಿ, ಡಿ. 15: ಯರವ ಮತ್ತು ಸೋಲಿಗ ಜನಾಂಗದ ಅಭಿವೃದ್ಧಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ವಸತಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯರವ ಮತ್ತು ಸೋಲಿಗ ಜನಾಂಗದವರ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಬಗ್ಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಸತಿ ಯೋಜನೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಅರ್ಧಕ್ಕೆ ನಿಂತಿರುವ ಮನೆಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ ಬಸವನಹಳ್ಳಿ ಲ್ಯಾಂಪ್ ಸೊಸೈಟಿ ಅಧ್ಯಕ್ಷರಾದ ಎಸ್.ಎನ್. ರಾಜಾರಾವ್ ಅವರು ಸೋಮವಾರಪೇಟೆ ತಾಲೂಕಿನಲ್ಲಿ 80 ಮನೆಗಳ ನಿರ್ಮಾಣದ ಕಾಮಗಾರಿ ಕುಂಠಿತಗೊಂಡಿದೆ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.

ತಾಲೂಕು ಐಟಿಡಿಪಿ ಇಲಾಖಾ ಅಧಿಕಾರಿಗಳು ವಸತಿ ಯೋಜನೆ ಅನುಷ್ಠಾನ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಈ ಬಗ್ಗೆ ಮಾಹಿತಿ ನೀಡಿದ ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಕುಡಿಯುವ ನೀರು ಸಂಬಂಧ ಕುಂದಾ ಬಸವೇಶ್ವರ ಕಾಲೋನಿ, ಚಿಕ್ಕ ರೇಷ್ಮೆ ಕಾಲೋನಿ, ಕಾವೇರಿ ಗಿರಿಜನ ಕಾಲೋನಿ, ರಾಮ, ಟಿ.ಶೆಟ್ಟಿಗೇರಿ, ದೇವರಕಾಡು ಗಿರಿಜನ ಕಾಲೋನಿಗಳಲ್ಲಿ ಕುಡಿಯುವ ನೀರು ಒದಗಿಸಬೇಕಿದೆ ಎಂದು ತಿಳಿಸಿದರು.

ಯರವ ಮತ್ತು ಸೋಲಿಗ ಜನಾಂಗದವರಿಗೆ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಕಂಪ್ಯೂಟರ್ ತರಬೇತಿ, ಹೊಲಿಗೆ ತರಬೇತಿ, ಬ್ಯೂಟೀಷಿಯನ್ ತರಬೇತಿ, ಸಾರಣೆ, ಬಾರ್‍ಬೆಂಡಿಂಗ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮೋದನೆ ನೀಡಬೇಕಿದೆ ಎಂದರು.

ಸೋಮವಾರಪೇಟೆ ತಾಲೂಕಿನಿಂದ 1 ಹಾಗೂ ವೀರಾಜಪೇಟೆ ತಾಲೂಕಿನಿಂದ 2 ಫಲಾನುಭವಿಗಳಿಗೆ ಶೇ.75ರ ಸಹಾಯಧನ ರೂ. 3.33 ಲಕ್ಷದಂತೆ ರೂ.10 ಲಕ್ಷವನ್ನು ಟಾಟಾ ಗೂಡ್ಸ್ ಆಟೋ ವಿತರಣೆ ಮಾಡಲು ನಿಗಧಿಪಡಿಸಲಾಗಿದ್ದು, ವೀರಾಜಪೇಟೆ ತಾಲೂಕಿನ 2 ಫಲಾನುಭವಿಗಳು ನಿಗಧಿಪಡಿಸಿರುವ ಸಹಾಯಧನದಲ್ಲಿ ಮಾರುತಿ ಓಮಿನಿ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

ಜಿ.ಪಂ. ಸದಸ್ಯರು ಹಾಗೂ ಮಡಿಕೇರಿ ತಾಲೂಕು ಲ್ಯಾಂಪ್ ಸೊಸೈಟಿ ಅಧ್ಯಕ್ಷ ಕುಮಾರ, ವೀರಾಜಪೇಟೆ ತಾಲೂಕು ಲ್ಯಾಂಪ್ ಸೊಸೈಟಿ ಅಧ್ಯಕ್ಷ ರಾಮು ಅವರು ವಸತಿ ಕಾಮಗಾರಿಗಳ ಅನುಷ್ಠಾನ ಮತ್ತು ಯರವ ಮತ್ತು ಸೋಲಿಗ ಜನಾಂಗದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಬೇಕಿದೆ ಎಂದು ಅವರು ತಿಳಿಸಿದರು.

ಜೇನುಕುರುಬರ ಸಮಾವೇಶ ಹಮ್ಮಿಕೊಳ್ಳಲು ಅನುದಾನ ನಿಗದಿಯಾಗಿದ್ದು, ಕಾರ್ಯಕ್ರಮ ಆಯೋಜನೆಗೆ ಸಹಕಾರಕ್ಕೆ ಎಸ್.ಎನ್. ರಾಜಾರಾವ್ ಅವರು ಕೋರಿದರು. ವೀರಾಜಪೇಟೆ ತಾಲೂಕು ಐಟಿಡಿಪಿ ಅಧಿಕಾರಿ ಚಂದ್ರಶೇಖರ, ಸೋಮವಾರಪೇಟೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶೇಖರ್ ಇತರರು ಇದ್ದರು.