ಸೋಮವಾರಪೇಟೆ, ಡಿ. 15: ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ ನಡೆಯಿತು. ಕಾರ್ತಿಕ ಮಾಸ ಹಾಗೂ ಲಕ್ಷ ದೀಪೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರದೊಂದಿಗೆ ನಾಗದೋಷ ಪರಿಹಾರ ಹಾಗೂ ಗ್ರಾಮದ ಶ್ರೇಯೋಭಿವೃದ್ದಿಗಾಗಿ ಸರ್ಪ ಶಾಂತಿ ಹಾಗೂ ಕುಜ ಶಾಂತಿ ಹೋಮ ನಡೆಯಿತು. ಪೂರ್ಣಾಹುತಿ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.

ಸಂಜೆ ಮಂಗಳ ವಾದ್ಯಘೋಷಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಂದಿ ಧ್ವಜ ಮೆರವಣಿಗೆ ನಡೆಯಿತು. ದೇವಾಲಯದ ಅರ್ಚಕ ಮಿಥುನ್ ಶಾಸ್ತ್ರಿ ಪುರೋಹಿತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ವೀರಶೈವ ಸಮಾಜದ ಅಧ್ಯಕ್ಷ ಶಿವಕುಮಾರ್, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಸಂಗಮೇಶ್, ಕಾರ್ಯದರ್ಶಿ ಮಲ್ಲಿಕಾರ್ಜುನ, ಪ್ರಮುಖರಾದ ಭುವನೇಶ್ವರ್, ಗಿರೀಶ್, ಮಹೇಶ್, ಸಚಿನ್ ಸೇರಿದಂತೆ ಇತರರು ಹಾಜರಿದ್ದರು.