ಕುಶಾಲನಗರ: ಕುಶಾಲನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಷಷ್ಠಿ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ದೇವರಿಗೆ ಅಭಿಷೇಕ, ಪುಷ್ಪಾಲಂಕಾರ, ವಸ್ತ್ರಾಲಂಕಾರ, ಷಷ್ಠಿ ಪೂಜೆÀ ಧಾರ್ಮಿಕ ವಿಧಿ, ವಿಧಾನಗಳು ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ನೆರವೇರಿತು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಿತು. ಹರಕೆ ಹೊತ್ತ ಭಕ್ತಾದಿಗಳು ಮುಂಜಾನೆಯಿಂದಲೇ ದೇವಾಲಯ ಅಂಗಳದಲ್ಲಿರುವ ಹುತ್ತವನ್ನು ಪೂಜಿಸಿ, ಹಾಲನ್ನು ಎರೆಯುತ್ತಿದ್ದ ದೃಶ್ಯ ಗೋಚರಿಸಿತು. ನಂತರ ದೇವಸ್ಥಾನಕ್ಕೆ ತೆರಳಿ ಭಕ್ತಾದಿಗಳು ಹಣ್ಣು-ಕಾಯಿ ಸಮರ್ಪಿಸಿದರು. ಪಟ್ಟಣದ ಜನತೆ ಸೇರಿದಂತೆ ಸುತ್ತಮುತ್ತಲಿನ ಊರುಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಷಷ್ಠಿ ಅಂಗವಾಗಿ ಸಂಜೆ ವೇಳೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ಸ್ವಾಮಿಯ ಉತ್ಸವವನ್ನು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಸೋಮವಾರಪೇಟೆ: ಷಷ್ಠಿ ಹಬ್ಬದ ಪ್ರಯುಕ್ತ ಸ್ಥಳೀಯ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನಾಗದೇವತೆಗಳಿಗೆ ಆಶ್ಲೇಷ ಪೂಜೆ ಹಾಗೂ ವಿವಿಧ ಅಭಿಷೇಕಗಳು ನಡೆಯಿತು.

ಬೆಳಿಗ್ಗೆ 8.30 ರಿಂದ 10.30 ರವರೆಗೆ ದೇವಾಲಯದ ಆವರಣದಲ್ಲಿ, ವಿಶೇಷವಾಗಿ ಹೂವಿನಿಂದ ಅಲಂಕರಿಸಿರುವ ನಾಗದೇವತೆಗಳ ಸನ್ನಿಧಾನದಲ್ಲಿ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಪೌರೋಹಿತ್ಯದಲ್ಲಿ ಆಶ್ಲೇಷ ಪೂಜೆ, ಶಿಯಾಳ, ಹಾಲು ಹಾಗೂ ಅರಿಶಿಣಾಭಿಷೇಕಗಳು ನಡೆಯಿತು.

ಇದರೊಂದಿಗೆ ಕರ್ಕಳ್ಳಿಯ ಕಟ್ಟೆ ಬಸವೇಶ್ವರÀ ದೇವಾಲಯ ಹಾಗೂ ಆನೆಕೆರೆ ಬಳಿಯ ನಾಗಬನದಲ್ಲಿ ಸುಬ್ರಮಣ್ಯ ಷಷ್ಠಿ ಪ್ರಯುಕ್ತ ಭಕ್ತಾಧಿಗಳು ತನಿ ಎರೆದು ಪೂಜೆ ಸಲ್ಲಿಸಿದರು. ಉಳಿದಂತೆ ಗ್ರಾಮೀಣ ಭಾಗದ ವಿವಿಧ ದೇವಾಲಯದಲ್ಲೂ ಷಷ್ಠಿ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಸುಂಟಿಕೊಪ್ಪ: ಇಲ್ಲಿನ ಮಧುರಮ್ಮ ಬಡಾವಣೆಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ 28ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವವನ್ನು ಆಚರಿಸಲಾಯಿತು.

ಬೆಳಗ್ಗಿನಿಂದಲೇ ಹೋಮ ವಿವಿಧ ಪೂಜಾ ಕೈಂಕರ್ಯವನ್ನು ದೇವಾಲಯದ ಅಧ್ಯಕ್ಷ ಎ.ಎಂ. ರಘು ಹಾಗೂ ಕುಟುಂಬಸ್ಥರು ನೆರವೇರಿಸಿದರು. ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತೀರ್ಥ-ಪ್ರಸಾದ, ಅನ್ನಸಂತರ್ಪಣೆ ಸ್ವೀಕರಿಸಿದರು.

ಸಿದ್ದಾಪುರ: ಸಿದ್ದಾಪುರದ ಹೈಸ್ಕೂಲ್ ಪೈಸಾರಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. ದೇವರಿಗೆ ಅಭಿಷೇಕ, ಮಹಾಪೂಜೆ, ಕಾವಾಡಿ ಕರಗ, ದೇವಿಯ ಪೂಜೆ, ಮಹಾಗುರು ಪೂಜೆ ಸೇರಿದಂತೆ ಪೂಜಾ ಕೈಂಕರ್ಯ ನಡೆಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಿದ್ದಾಪುರದ ಮಡಿಕೇರಿ ರಸ್ತೆಯ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿಯೂ ಕೂಡ ಷಷ್ಠಿಯನ್ನು ಆಚರಿಸಲಾಯಿತು. ಸೋಮವಾರಪೇಟೆ: ಸಮೀಪದ ಸಿದ್ಧಲಿಂಗಪುರ-ಅರಶಿಣಗುಪ್ಪೆ ಗ್ರಾಮದಲ್ಲಿರುವ ಮಂಜುನಾಥ ಮತ್ತು ನವನಾಗಕ್ಷೇತ್ರದಲ್ಲಿ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

ಬೆಳಿಗ್ಗೆಯಿಂದಲೇ ರುದ್ರಾಭಿಷೇಕ, ಗಣಪತಿ ಹೋಮ, ನವ ನಾಗನಿಗೆ ವಿಶೇಷ ಅಲಂಕಾರ ಪೂಜೆ, ಕ್ಷೀರಾಭಿಷೇಕ, ಎಳನೀರು ಅಭಿಷೇಕ, ತಂಬಿಲ ಸೇವೆಗಳು ನಡೆದವು. ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ಈ ಸಂದರ್ಭ ನಾಗಕ್ಷೇತ್ರದ ಮುಂಭಾಗ ರೂ.4 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮಂಟಪಕ್ಕೆ ಸಹಾಯ ನೀಡಿದ ದೇವಾಲಯ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ ಹಾಗೂ ನಿರ್ಮಾಣ ಕಾರ್ಯದ ಉಸ್ತುವಾರಿ ವಹಿಸಿದ್ದ ಕುಶಾಲನಗರದ ಉದ್ಯಮಿ ಶಿವಶಂಕರ್ ಅವರುಗಳನ್ನು ದೇವಾಲಯದ ಮುಖ್ಯಸ್ಥರಾದ ರಾಜೇಶ್‍ನಾಥ್ ಗುರೂಜಿ ಅವರು ಸನ್ಮಾನಿಸಿದರು.

ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕರಾದ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ನಡೆದವು. ಅರ್ಚಕರಾದ ಮಣಿಕಂಠನ್ ನಂಬೂದರಿ, ವ್ಯಾಸರಾಜಭಟ್, ಕಿರಣ್ ಪೂಜೋತ್ಸವದಲ್ಲಿ ಭಾಗವಹಿಸಿದ್ದರು.