ಮಡಿಕೇರಿ, ಡಿ. 15 : ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ಕಷ್ಟ-ನಷ್ಟ ಉಂಟಾಯಿತು. ಅದರಿಂದ ಹೊರಬರುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಸರ್ಕಾರದ ಅಂಗ ಸಂಸ್ಥೆಗಳು ಸೇರಿದಂತೆ ಹಲವರು ಕೈಜೋಡಿಸಿ ದರು. ಆ ದಿಸೆಯಲ್ಲಿ ಯುನೈಟೆಡ್ ನೇಷನ್ ಚಿಲ್ಡ್ರನ್ಸ್ ಫಂಡ್ (ಯೂನಿಸೆಫ್) ವತಿಯಿಂದ ಸಮಗ್ರ ಕೊಡಗು ಸ್ಪಂದನಾ ಯೋಜನೆ ರೂಪಿಸಿದ್ದು ಕೊಡಗು ಪುನಃಶ್ಚೇತನಕ್ಕೆ ಸಹಕಾರಿಯಾಗಲಿದೆ ಎಂದು ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕೋಟೆ ಹಳೇ ವಿಧಾನ ಸಭಾಂಗಣ ದಲ್ಲಿ ಶನಿವಾರ ನಡೆದ ‘ಸಮಗ್ರ ಕೊಡಗು ಸ್ಪಂದನಾ ಯೋಜನೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸ್ಥಳಗಳು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಮಕ್ಕಳಿಗೆ ಆರೋಗ್ಯ, ಶಿಕ್ಷಣ, ನೈರ್ಮಲ್ಯ, ಶುಚಿತ್ವ, ಪೋಷಣೆ, ಶುದ್ಧ ಕುಡಿಯುವ ನೀರು, ಮಕ್ಕಳ ರಕ್ಷಣೆ ಮತ್ತಿತ್ತರ ಬಗ್ಗೆ ಅರಿವು ಮೂಡಿಸುವುದು. ಜೊತೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಗಮನಕ್ಕೆ ತಂದು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವದು ‘ಸಮಗ್ರ ಕೊಡಗು ಸ್ಪಂದನಾ ಯೋಜನೆ’ಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಮಾತನಾಡಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಎಲ್ಲರೂ ಸಹಕರಿಸಿ ದರು. ಆ ದಿಸೆಯಲ್ಲಿ ಯೂನಿಸೆಫ್ ಸಂಸ್ಥೆಯ ಹೈದರಾಬಾದ್ನ ಮುಖ್ಯಸ್ಥರು ದೂರವಾಣಿ ಮೂಲಕ ಸಂಪರ್ಕಿಸಿ ಮಕ್ಕಳು ಮತ್ತು ಮಹಿಳೆಯರ ಶಿಕ್ಷಣ, ಆರೋಗ್ಯ ಮತ್ತು ಪೋಷಣೆ ಮತಿತ್ತರ ಬಗ್ಗೆ ಚರ್ಚಿಸಿ, ಅಗತ್ಯ ಸಹಕಾರ ನೀಡಿದರು ಎಂದು ತಿಳಿಸಿದರು.
ಜಿ.ಪಂ. ಸಿಇಒ ಕೆ. ಲಕ್ಷ್ಮಿಪ್ರಿಯ ಮಾತನಾಡಿ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಪೋಷಕಾಂಶ ಮತಿತ್ತರ ಬಗ್ಗೆ ಒತ್ತು ನೀಡಲಾಗುತ್ತದೆ. ಆ ದಿಸೆಯಲ್ಲಿ ಮುಂದಿನ 7 ತಿಂಗಳಲ್ಲಿ ಕೊಡಗು ಸಮಗ್ರ ಸ್ಪಂದನಾ ಯೋಜನೆ ಅನುಷ್ಠಾನ ಕಾರ್ಯಗಳು ನಡೆಯಲಿವೆ ಎಂದರು.
ಯೂನಿಸೆಫ್ನ ಅಧಿಕಾರಿ ವೆಂಕಟೇಶ್ ಅರಳೀಕಟ್ಟಿ ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರು ತುಂಬಾ ತೊಂದರೆ ಅನುಭವಿಸಿದರು. ಯೂನಿಸೆಫ್ ವತಿಯಿಂದ ಯಾವ ರೀತಿ ಸ್ಪಂದನೆ ನೀಡಬಹುದೆಂದು ಜಿಲ್ಲಾಧಿಕಾರಿಯವರು ಜಿ.ಪಂ.ಸಿಇಒ ಅವರೊಂದಿಗೆ ಚರ್ಚಿಸಲಾಯಿತು. ಯೂನಿಸೆಫ್ ಸಂಸ್ಥೆಯು ವಿಪತ್ತು ನಿರ್ವಹಣೆ ಮತ್ತು ವಿಪತ್ತಿನ ಹಾನಿ ತಗ್ಗಿಸುವ ಕಾರ್ಯದಲ್ಲಿ ಮಕ್ಕಳ ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳವಂತಾಗಲು, ಜಿಲ್ಲಾಡಳಿತಕ್ಕೆ ಸಹಕರಿಸಲು ಸಮಗ್ರ ಕೊಡಗು ಸ್ಪಂದನಾ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಯೂನಿಸೆಫ್ನ ಕೊಡಗು ಜಿಲ್ಲಾ ಸಮಾಲೋಚಕರಾದ ಪ್ರಭಾತ್ ಎಂ.ವಿ. ಕಲ್ಲೂರ ಮಾತನಾಡಿದರು.
ಯೂನಿಸೆಫ್ನ ಬೆಂಗಳೂರು ಕೇಂದ್ರದ ಅಧಿಕಾರಿ ಮಮತ ಇತರರು ಇದ್ದರು. ಮನೋಹರ ನಿರೂಪಿಸಿ ದರು, ಸಂತ ಮೈಕಲರ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಸಂಧ್ಯಾ ಸ್ವಾಗತಿಸಿದರು, ಡಿಡಿಪಿಐ ಮಚ್ಚಾಡೋ ವಂದಿಸಿದರು.