ಮಡಿಕೇರಿ, ಡಿ. 15: ಭತ್ತಕ್ಕೆ ನೀಡಲು ಉದ್ದೇಶಿಸಿರುವ ಬೆಂಬಲ ಬೆಲೆಯನ್ನು ರೂ. 1,550 ರಿಂದ ರೂ. 3,000 ಕ್ಕೆ ಹೆಚ್ಚಳ ಮಾಡಬೇಕು ಹಾಗೂ ಹುಲ್ಲು ಸಾಗಾಟಕ್ಕೆ ವಿಧಿಸಿರುವ ನಿರ್ಬಂಧ ಸಡಿಲಿಕೆ ಮತ್ತಿತರ ಬೇಡಿಕೆಗಳನ್ನು ಮುಂದಿರಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ನಿನ್ನೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಈ ಬೇಡಿಕೆಯೊಂದಿಗೆ ಡಾ. ಕಸ್ತೂರಿ ರಂಗನ್ ವರದಿಯ ಬಗ್ಗೆ ಕೇಂದ್ರ ಸರಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯನ್ನು ಈ ಹಿಂದಿನ ಭರವಸೆಯಂತೆ ಹಿಂಪಡೆಯ ಬೇಕೆಂದೂ ಆಗ್ರಹಿಸಲಾಯಿತು.
ಭತ್ತಕ್ಕೆ ರೂ. 3 ಸಾವಿರ ಬೆಂಬಲ ಬೆಲೆ ನೀಡಿದಲ್ಲಿ ಮಾತ್ರ ರೈತರಿಗೆ ಸುಧಾರಿಸಿಕೊಳ್ಳಲು ಸಾಧ್ಯವಿದೆ. ಇದರೊಂದಿಗೆ ಹುಲ್ಲು ಸಾಗಾಟ ನಿರ್ಬಂಧವೂ ರೈತರಿಗೆ ಸಮಸ್ಯೆಯಾಗಿದೆ. ನಿರ್ಬಂಧ ಹಿಂಪಡೆದು ಸರಕಾರವೇ ಕಂತೆಗೆ ರೂ. 30 ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬುಡಕಟ್ಟು ಜನರು ಸೇರಿದಂತೆ ಹಲವರಿಗೆ ಇನ್ನೂ ಹಕ್ಕುಪತ್ರ ದೊರೆತಿಲ್ಲ. ಇವರಿಗೆ ಅವರ ಸ್ವಾಧೀನದಲ್ಲಿರುವ ಜಾಗದ ಹಕ್ಕುಪತ್ರ ನೀಡುವಂತೆಯೂ ಒತ್ತಾಯಿಸಲಾಗಿದೆ. ಪ್ರತಿಭಟನೆಯಲ್ಲಿ ಡಾ. ಐ.ಆರ್. ದುರ್ಗಾ ಪ್ರಸಾದ್, ಕೆ.ಎ. ಹಂಸ, ಬಾಪುಟ್ಟಿ, ಹಮೀದ್, ಕೆ.ಪಿ. ಪ್ರಸನ್ನ, ಕುಶಾಲಪ್ಪ, ರವಿ ಹಾಜರಿದ್ದರು.