ಕೂಡಿಗೆ, ಡಿ. 16: ಕೂಡಿಗೆ ಸೈನಿಕ ಶಾಲೆಯಲ್ಲಿ 2018-19ನೇ ಸಾಲಿನ ಅಂತರ ನಿಲಯ ವಾರ್ಷಿಕ ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ನಿವೃತ್ತ ಪೊಲೀಸ್ ಉಪಮಹಾನಿರೀಕ್ಷಕ (ಡಿ.ಐ.ಜಿ.ಪಿ.) ಅರ್ಕೇಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಾಲೆಯ ಉಪಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಡುವದ ರೊಂದಿಗೆ ಶಾಲೆಯ ವಿದ್ಯಾರ್ಥಿಗಳು ಆಕರ್ಷಕವಾದ ಪಥಸಂಚಲನವನ್ನು ನಡೆಸುವದರ ಮೂಲಕ ಮುಖ್ಯ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ಈ ಸಂದರ್ಭ ಮುಖ್ಯ ಅತಿಥಿಗಳು ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಪದಕ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕ ವನ್ನು ವಿತರಿಸಿ ಗೌರವಿಸಿದರು.
ವಿದ್ಯಾರ್ಥಿಗಳು ಶಾಲೆ ನೀಡಿರುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಭವ್ಯ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯು ಇಂದಿನಿಂದಲೇ ಸಿದ್ಧಗೊಳ್ಳಬೇಕೆಂದು ಅರ್ಕೇಶ್ ಕರೆ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಜನ್ಮವೆತ್ತ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರು ನೀಡಿರುವ ಸೇವೆಯನ್ನು ಸ್ಮರಿಸುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯು ಈ ಹಿರಿಯ ಅಧಿಕಾರಿಗಳನ್ನು ತಮ್ಮ ಜೀವನದ ಆದರ್ಶ ಪುರಷರನ್ನಾಗಿ ಹೊಂದಬೇಕೆಂದು ಕಿವಿಮಾತು ಹೇಳಿದರು.
ಕ್ರೀಡಾಕೂಟದಲ್ಲಿ ಮೆನನ್ ನಿಲಯವು 2018-19ನೇ ಸಾಲಿನ ವಾರ್ಷಿಕ ಕ್ರೀಡಾಕೂಟದ ಚಾಂಪಿಯನ್ ತಂಡವಾಗಿ ಮೊದಲ ಸ್ಥಾನವನ್ನು ಪಡೆದರೆ, ಸುಬ್ರತೋ ಸದನವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಹಿರಿಯರ ವಿಭಾಗದಿಂದ ಕೆಡೆಟ್ ಧೀಮಂತ್ ಮತ್ತು ಕೆಡೆಟ್ ಶೀಲಸೇನ್ ಮತ್ತು ಕಿರಿಯರ ವಿಭಾಗದಿಂದ ಕೆಡೆಟ್ ರಾಮ್ ಕುಮಾರ್ ಅಸ್ಕಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು.
ಪ್ರಸ್ತುತ ಕ್ರೀಡಾಕೂಟದಲ್ಲಿ ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್, ಉಪ ಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿ ಗಳಾದ ಸ್ಕ್ವಾಡ್ರನ್ ಲೀಡರ್ ಡಿ. ಮ್ಯಾಥ್ಯು, ವೈದ್ಯಾಧಿಕಾರಿಗಳಾದ ಡಾ. ಮಹೇಶ್, ಹಿರಿಯ ಶಿಕ್ಷಕ ಸೂರ್ಯ ನಾರಾಯಣ, ಕ್ರೀಡಾ ಶಾಲೆಯ ಪ್ರಾಂಶುಪಾಲೆ ಕುಂತಿ ಬೋಪಯ್ಯ, ದೈಹಿಕ ನಿರ್ದೇಶಕರಾದ ಆಂಟೋನಿ, ಬೋಧಕ, ಬೋಧಕೇತರ ವರ್ಗ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.