ಗೋಣಿಕೊಪ್ಪ ವರದಿ, ಡಿ. 16: ಭೂಕುಸಿತದಿಂದ ಮನೆ, ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರದಿಂದ ಯಾವ ಸವಲತ್ತು ದೊರೆಯುತ್ತಿಲ್ಲ ಎಂದು ಸಂತ್ರಸ್ತ ನಾಗೇಶ್ ಕಾಲೂರು ಆರೋಪಿಸಿದರು. ಸಂತ್ರಸ್ತರಿಗೆ ನೆರವು ನೀಡಲು ಅಮ್ಮತ್ತಿ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಆಯೋಜಿಸಿದ್ದ ಪರಿಹಾರ ಧನ ವಿತರಣೆ ಕಾರ್ಯಕ್ರಮದಲ್ಲಿ ಸಂತ್ರಸ್ತರ ಪರವಾಗಿ ಮಾತನಾಡಿದರು. ಅಮ್ಮತ್ತಿ ಭಾಗದಲ್ಲಿ ಸಂತ್ರಸ್ತರು ತಯಾರಿಸಿದ ಮಸಾಲೆ ಪುಡಿಯನ್ನು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುವದು. ಸಂತ್ರಸ್ತರ ಆರ್ಥಿಕ ಭದ್ರತೆಗೆ ಅವಕಾಶ ಮಾಡಿಕೊಡಲಾಗುವದು ಎಂದು ಗ್ರಾಮಸ್ಥರು ಈ ಸಂದರ್ಭ ಘೋಷಿಸಿ ದರು. ಮಸಾಲೆ ತಯಾರಿಕೆಗೆ ಆರ್ಥಿಕ ಸಹಾಯ ನೀಡುವದಾಗಿ ಗ್ರಾಮಸ್ಥರು ಭರವಸೆ ನೀಡಿದರು. ಸುಮಾರು 12 ಸಂತ್ರಸ್ತರಿಗೆ ಪರಿಹಾರ ವಿತರಿಸಲಾಯಿತು.

ದೇವಸ್ಥಾನ ಸಮಿತಿ ಉಪಾಧ್ಯಕ್ಷ ಕುಟ್ಟಂಡ ಪ್ರಿನ್ಸ್ ಗಣಪತಿ ಮಾತನಾಡಿ, ಈ ಬಾರಿ ಗೌರಿ-ಗಣೇಶ ಉತ್ಸವವನ್ನು ಸರಳವಾಗಿ ಆಚರಿಸಿ, ಸಂಗ್ರಹಿಸಿದ 30 ಸಾವಿರ, ದೇವಸ್ಥಾನ ದಿಂದ 30 ಸಾವಿರ ಸಂಗ್ರಹಿಸಿ ಒಟ್ಟು 60 ಸಾವಿರ ಹಣವನ್ನು ಪರಿಹಾರ ವಾಗಿ ನೀಡಲಾಗುತ್ತಿದೆ ಎಂದರು.

ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಮಾಚಿಮಂಡ ಮದು, ಕಾರ್ಯದರ್ಶಿ ರವಿ ತಮ್ಮಯ್ಯ, ಖಜಾಂಚಿ ಜಯ ಉತ್ತಪ್ಪ, ಸ್ಥಳೀಯ ಜಿ.ಪಂ. ಸದಸ್ಯ ಶಶಿ ಸುಬ್ರಮಣಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.