ಮಡಿಕೇರಿ, ಡಿ. 16: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಯರವ ಯುವ ಒಕ್ಕೂಟದ ವತಿಯಿಂದ ಗೋಣಿಕೊಪ್ಪದಲ್ಲಿ ತಾ. 17 ರಂದು (ಇಂದು) ಜನಜಾಗೃತಿ ಸಮಾವೇಶ ನಡೆಯಲಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ಪಿ.ಎಸ್. ಮುತ್ತ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಗೋಣಿಕೊೂಪ್ಪದ ಉಮಾಮಹೇಶ್ವರಿ ದೇವಸ್ಥಾನದ ಬಳಿಯಿಂದ ಆರ್.ಎಂ.ಸಿ. ಮೈದಾನದವರೆಗೆ ಮೆರವಣಿಗೆ ನಡೆಸಿ ನಂತರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಮನವಿ ಸಲ್ಲಿಸಲಾಗುವದೆಂದು ಹೇಳಿದ್ದಾರೆ.

ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವ ಯರವ ಸಮುದಾಯಕ್ಕೆ ಪ್ರತ್ಯೇಕ ಪ್ಯಾಕೇಜ್ ಬಿಡುಗಡೆ ಮಾಡಬೇಕು, ಬುಡಕಟ್ಟು ಸಮುದಾಯಕ್ಕೆ ಭೂಮಿ ಹಂಚಿಕೆ ಮಾಡಲು ಪ್ರತ್ಯೇಕ ಸಚಿವ ಸಂಪುಟ ಸಭೆಯನ್ನು ಜಿಲ್ಲೆಯಲ್ಲೆ ಕರೆಯಬೇಕು, ಜಿಲ್ಲೆಯಲ್ಲಿರುವ ಸರಕಾರಿ ಜಮೀನನ್ನು ನಿವೇಶನ ರಹಿತರಿಗೆ ಹಂಚಬೇಕು, ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸಬೇಕು, ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಸಮಿತಿ ಮತ್ತು ಅರಣ್ಯ ಹಕ್ಕು ಸಮಿತಿಯ ಉಪಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಗಳನ್ನು ರಚಿಸಬೇಕು, ಉತ್ತಮ ಗುಣಮಟ್ಟದ ದಿನಸಿ ಸಾಮಗ್ರಿಗಳನ್ನು ಯರವ ಸಮುದಾಯಕ್ಕೆ ನೀಡಬೇಕು, ಆದಿವಾಸಿ ಸಮುದಾಯದ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ದೊರಕಿಸಿ ಕೊಡಬೇಕು, ಸರಕಾರ ಜಾರಿಗೆ ತಂದಿರುವ ಪಿಂಚಣಿ ಯೋಜನೆ ಸೇರಿದಂತೆ ಇತರ ಎಲ್ಲಾ ಸೌಲಭ್ಯಗಳನ್ನು ಆದಿವಾಸಿಗಳಿಗೆ ನೀಡಬೇಕೆಂದು ಒತ್ತಾಯಿಸಿ ಸಮಾವೇಶ ನಡೆಸಲಾಗುತ್ತಿದೆ ಎಂದು ಮುತ್ತ ತಿಳಿಸಿದ್ದಾರೆ.