ಮಡಿಕೇರಿ, ಡಿ. 15: ನೋಂದಾಯಿತ ಕಟ್ಟಡ ಕಾರ್ಮಿಕರು ಅಥವಾ ಅವರ ಇಬ್ಬರು ಮಕ್ಕಳ ವಿವಾಹಕ್ಕೆ ತಲಾ ರೂ. 50 ಸಾವಿರ ಸಹಾಯಧನ ಸೌಲಭ್ಯವಿದ್ದು, ಅರ್ಹರು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಹೆಚ್. ರಾಮಕೃಷ್ಣ ತಿಳಿಸಿದ್ದಾರೆ.

ಕಟ್ಟಡ ಕಾರ್ಮಿಕರು ಮತ್ತು ಅವರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಹೆರಿಗೆ ಭತ್ಯೆ ಸೌಲಭ್ಯ, ವೈದ್ಯಕೀಯ ವೆಚ್ಚ ಹೀಗೆ ಹಲವು ರೀತಿಯ ಸೌಲಭ್ಯವಿದ್ದು, ಜಿಲ್ಲೆಯಲ್ಲಿ 4,272 ಕಟ್ಟಡ ಕಾರ್ಮಿಕರು ಹೆಸರು ನೋಂದಾಯಿಸಿದ್ದು, ಇದುವರೆಗೆ 1250 ಮಂದಿ ವಿವಿಧ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಟ್ಟಡ ಕಾರ್ಮಿಕರ ಇಬ್ಬರು ಮಕ್ಕಳಿಗೆ ಮೂರನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಕನಿಷ್ಟ 3 ಸಾವಿರದಿಂದ ಗರಿಷ್ಠ ರೂ. 20 ಸಾವಿರವರೆಗೆ ಶೈಕ್ಷಣಿಕ ಧನ ಸಹಾಯ ಒದಗಿಸಲಾಗುತ್ತದೆ. ಹಾಗೆಯೇ ಕಟ್ಟಡ ಕಾರ್ಮಿಕರ ಪತ್ನಿಯರಿಗೆ ರೂ. 30 ಸಾವಿರ ಹೆರಿಗೆ ಭತ್ಯೆ ನೀಡುವ ಸೌಲಭ್ಯವಿದೆ ಎಂದು ಎಂ.ಹೆಚ್. ರಾಮಕೃಷ್ಣ ತಿಳಿಸಿದ್ದಾರೆ.

ಫಲಾನುಭವಿಗಳಿಗೆ ದೊರೆಯುವ ಸೌಲಭ್ಯಗಳು: ಪಿಂಚಣಿ ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸಿಕ ರೂ. 1 ಸಾವಿರ, ದುರ್ಬಲತೆ ಪಿಂಚಣಿ-ಫಲಾನುಭವಿಗಳಿಗೆ ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ರೂ. 1 ಸಾವಿರ, ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ. 2 ಲಕ್ಷದವರೆಗೆ ಅನುಗ್ರಹ ರಾಶಿ ಸಹಾಯಧನ ಹಾಗೂ ಟ್ರೈನಿಂಗ್-ಕಮ್-ಟೂಲ್‍ಕಿಟ್ ಸೌಲಭ್ಯ (ಶ್ರಮ ಸಾಮಥ್ರ್ಯ) ರೂ. 20 ಸಾವಿರದವರೆಗೆ, ಹೆರಿಗೆ ಸೌಲಭ್ಯ-ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿಗೆ ರೂ. 30 ಸಾವಿರ ಮತ್ತು ಗಂಡು ಮಗುವಿಗೆ ರೂ. 20 ಸಾವಿರ, ಅಂತ್ಯಕ್ರಿಯೆ ವೆಚ್ಚ ರೂ. 4 ಸಾವಿರ ಹಾಗೂ ಎಕ್ಸ್ ಗ್ರೇಷಿಯಾ ರೂ. 50 ಸಾವಿರ ಸಹಾಯಧನ.

ಶೈಕ್ಷಣಿಕ ಸಹಾಯಧನಕ್ಕೆ ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 4, 5 ಹಾಗೂ 6ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 3 ಸಾವಿರ, 7 ಹಾಗೂ 8ನೇ ತರಗತಿ ಉತ್ತೀರ್ಣರಾದವರಿಗೆ ರೂ. 4 ಸಾವಿರ, 9, 10ನೇ ತರಗತಿ ಹಾಗೂ ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ ರೂ. 6 ಸಾವಿರ, ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ ರೂ. 8 ಸಾವಿರ, ಐಟಿಐ ಮತ್ತು ಡಿಪ್ಲೊಮಾ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ ರೂ. 7 ಸಾವಿರ, ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ ರೂ. 10 ಸಾವಿರ, ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ. 20 ಸಾವಿರ ಹಾಗೂ ಪ್ರತಿ ವರ್ಷ ರೂ. 10 ಸಾವಿರಗಳಂತೆ (ಎರಡು ವರ್ಷಗಳಿಗೆ), ಇಂಜಿನಿಯರ್ ಕೋರ್ಸ್ ಸೇರ್ಪಡೆಗೆ ರೂ. 25 ಸಾವಿರ ಹಾಗೂ ಪ್ರತಿ ವರ್ಷ ತೇರ್ಗಡೆಗೆ ರೂ. 20 ಸಾವಿರ, ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ. 30 ಸಾವಿರ, ಹಾಗೂ ಪ್ರತಿ ವರ್ಷ ತೇರ್ಗಡೆಗೆ ರೂ. 25 ಸಾವಿರ, ಪಿಎಚ್‍ಡಿ ಕೋರ್ಸ್ ಪ್ರತಿ ವರ್ಷಕ್ಕೆ ರೂ. 20 ಸಾವಿರ (ಗರಿಷ್ಠ ಎರಡು ವರ್ಷಗಳು) ಮತ್ತು ಪಿಎಚ್‍ಡಿ ಪ್ರಬಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ. 20 ಸಾವಿರ, ಪ್ರತಿಭಾವಂತ ಮಕ್ಕಳಿಗಾಗಿ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ. 75 ಅಂಕ ಪಡೆದವರಿಗೆ ರೂ. 5 ಸಾವಿರ, ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ. 75 ಅಂಕ ಪಡೆದವರಿಗೆ ರೂ. 7 ಸಾವಿರ, ಪದವಿ ಅಥವಾ ತತ್ಸಮಾನ ಕೋರ್ಸ್‍ನಲ್ಲಿ ಶೇ. 75 ಅಂಕ ಪಡೆದವರಿಗೆ ರೂ. 10 ಸಾವಿರ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್‍ನಲ್ಲಿ ಶೇ. 75 ಅಂಕ ಪಡೆದವರಿಗೆ ರೂ. 15 ಸಾವಿರ.

ವೈದ್ಯಕೀಯ ಸೌಲಭ್ಯ: ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಭಿತರಿಗೆ ರೂ. 300 ರಿಂದ ರೂ. 10 ಸಾವಿರದವರೆಗೆ ವೈದ್ಯಕೀಯ ಸಹಾಯಧನ ನೀಡುವ ಸೌಲಭ್ಯವಿದೆ. ಮರಣ ಹೊಂದಿದ್ದಲ್ಲಿ ರೂ. 5 ಲಕ್ಷ, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ರೂ.2 ಲಕ್ಷ ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ರೂ. 1 ಲಕ್ಷ ಅಪಘಾತ ಪರಿಹಾರ ನೀಡಲಾಗುವದು. ಸಾಮಾನ್ಯ ಶಸ್ತ್ರಚಿಕಿತ್ಸೆಗೆ ರೂ. 2 ಲಕ್ಷದವರೆಗೆ ವೈದ್ಯಕೀಯ ವೆಚ್ಚ ಸಹಾಯಧನ ನೀಡಲಾಗುವದು.

ಕಾರ್ಮಿಕ ಅನಿಲ ಭಾಗ್ಯ ಸಂಪರ್ಕ ಸೌಲಭ್ಯದಡಿ ಅನಿಲ ಸಂಪರ್ಕದೊಂದಿಗೆ ಎರಡು ಬರ್ನಲ್ ಸ್ಟೌವ್ ಮತ್ತು ಪ್ರತಿ ಮೂರು ತಿಂಗಳಿಗೆ ಒಮ್ಮೆ ಸಿಲಿಂಡರ್ ರೀಫಿಲ್ ಮಾಡಲಾಗುವದು. ರಾಜ್ಯದಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಕೆಎಸ್‍ಆರ್‍ಟಿಸಿ ಬಸ್ ಪಾಸ್‍ನ ಸೌಲಭ್ಯ ನೀಡಲಾಗುವದು.