ಗೋಣಿಕೊಪ್ಪ ವರದಿ, ಡಿ. 16: ತಿತಿಮತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಡಾನೆ ಹಾವಳಿಗೆ ಶಾಶ್ವತ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿರುವ ತಿತಿಮತಿ, ನೊಕ್ಯ ಗ್ರಾಮಸ್ಥರು, 10 ದಿನಗಳಲ್ಲಿ ಪರಿಹಾರಕ್ಕೆ ಮುಂದಾಗದಿದ್ದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದೆ.

ತಿತಿಮತಿ ಗ್ರಾಮ ಪಂಚಾಯಿತಿ, ಗ್ರಾಮದ ಮುಖಂಡರುಗಳು ತಿತಿಮತಿ ಎಸಿಎಫ್ ಶ್ರೀಪತಿ ಅವರಿಗೆ ಮನವಿ ಸಲ್ಲಿಸಿದ್ದು, ಮುಂದಿನ ಕ್ರಮಕ್ಕೆ ಮುಂದಾಗದಿದ್ದಲ್ಲಿ ತಾ. 26 ರಂದು ತಿತಿಮತಿ, ದೇವರಪುರ, ನೊಕ್ಯ, ಕ್ಲತೋಡು, ಮಾಯಮುಡಿ, ಬಾಳಾಜಿ ಸುತ್ತಲ ಗ್ರಾಮಸ್ಥರನ್ನು ಸೇರಿಸಿ ಎಎಸಿಎಫ್ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು. ಈ ಸಂದರ್ಭ ಎಸಿಎಫ್ ಪರಿಹಾರ ಕ್ರಮಗಳ ಕುರಿತು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.

ನೊಕ್ಯಾ ಗ್ರಾಮಕ್ಕೆ ನುಸುಳುವ ಆನೆಗಳ ತಡೆಗೆ ನಿರ್ಮಿಸಲು ಉದ್ದೇಶಿಸಿರುವ ರೈಲ್ವೆ ಕಂಬಿಗಳನ್ನು ತುರ್ತಾಗಿ ಆನೆಗಳು ನುಸುಳುವ ಜಾಗದಲ್ಲಿ ಅಳವಡಿಸಬೇಕು, ಕಾಡು ಸೇರಿರುವ ಚೆಪ್ಪುಡೀರ ಕುಟುಂಬದ ಸ್ಕಾಲರ್‍ಶಿಪ್ ಜಾಗದ ಕಾಡು ತೆರವು ಮಾಡುವದು, ರೈತರ ಬೆಳೆಯನ್ನು ರಕ್ಷಿಸಲು ಶೀಘ್ರವಾಗಿ ಯೋಜನೆ ರೂಪಿಸಬೇಕು, ಈಗಾಗಲೇ ಕಾಫಿ, ಕಾಳುಮೆಣಸು ಬೆಳೆ ಕೊಯ್ಲು ಸಮಯವಾಗಿರುವದರಿಂದ ಬೆಳೆಗಾರರು, ಕಾರ್ಮಿಕರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಗ್ರಾಮದ ಹಿರಿಯ ಬೆಳೆಗಾರರುಗಳಾದ ಚೆಪ್ಪುಡೀರ ಎ. ಕಾರ್ಯಪ್ಪ, ಚೆಕ್ಕೇರ ಎಂ. ಬೆಳ್ಯಪ್ಪ, ಚೆಪ್ಪುಡೀರ ರಾಮಕೃಷ್ಣ, ಮಹೇಶ್, ಗ್ರಾ.ಪಂ. ಸದಸ್ಯ ಅನೂಪ್ ಪಾಲ್ಗೊಂಡಿದ್ದರು.