ಗೋಣಿಕೊಪ್ಪ ವರದಿ, ಡಿ. 16: ಕೂರ್ಗ್ ಕ್ರಿಕೆಟ್ ಅಕಾಡೆಮಿ ವತಿಯಿಂದ ಇಲ್ಲಿನ ಕಾಪ್ಸ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಅಂತರ್ ಪದವಿಪೂರ್ವ ಕಾಲೇಜು ಮಟ್ಟದ ಆಲಿ ಟೂರ್ಸ್-ಟ್ರಾವಲ್ಸ್ ಕ್ರಿಕೆಟ್ ಟ್ರೋಫಿಯನ್ನು ಕಾಪ್ಸ್ ತಂಡ ಗೆದ್ದುಕೊಂಡು ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಆ ಮೂಲಕ ಕಾಪ್ಸ್ ತಂಡವು ಮಂಗಳೂರು ವಲಯ ಮಟ್ಟದ ಕ್ರಿಕೆಟ್ ಟೂರ್ನಿಗೆ ಪ್ರವೇಶ ಪಡೆದಿವೆ. ಫೈನಲ್ನಲ್ಲಿ ಸೋಲನುಭವಿಸಿದ ವೀರಾಜಪೇಟೆ ಕಾವೇರಿ ಕಾಲೇಜು ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಕಾಪ್ಸ್ ತಂಡವು ವೀರಾಜಪೇಟೆ ಕಾವೇರಿ ಕಾಲೇಜು ತಂಡದ ಎದುರು 89 ರನ್ಗಳ ಗೆಲವು ದಾಖಲಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಾಪ್ಸ್ ತಂಡವು ನಿಗದಿತ 25 ಓವರ್ಗಳಲ್ಲಿ 232 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ನಂತರ ಬ್ಯಾಟ್ ಮಾಡಿದ ಕಾವೇರಿ ಕಾಲೇಜು ತಂಡ 143 ರನ್ಗಳಿಸಲಷ್ಟೆ ಶಕ್ತವಾಯಿತು. ಪರಿಣಾಮ 89 ರನ್ಗಳ ಸೋಲು ಅನುಭವಿಸಿತು.
ಕಾಪ್ಸ್ ಪರ ತಿಮ್ಮಯ್ಯ 58 ರನ್ ಸಿಡಿಸಿ ನಾಟೌಟ್ ಸಾಧನೆ ಮಾಡಿದರು. ಉಳಿದಂತೆ ನೀರಜ್ 45, ಚಂದನ್ 17 ರನ್ ಗಳಿಸಿದರು. ಕಾಪ್ಸ್ ತಂಡದ ಅಯ್ಯಪ್ಪ 3 ವಿಕೆಟ್, ಧ್ಯಾನ್ 2 ವಿಕೆಟ್ ಪಡೆದರು. ಕಾವೇರಿ ಕಾಲೇಜು ಪರ ರಾಹುಲ್ 47 ರನ್ ಬಾರಿಸಿದರು.
ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಕಾಪ್ಸ್ ತಂಡದ ಗಗನ್ ಪಡೆದುಕೊಂಡರು. ಬೆಸ್ಟ್ ಬ್ಯಾಟ್ಸ್ಮನ್ ಆಗಿ ಕಾವೇರಿ ಕಾಲೇಜು ತಂಡದ ರಾಹುಲ್, ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ಕಾವೇರಿ ಕಾಲೇಜಿನ ಗಣಪತಿ, ಬೆಸ್ಟ್ ಆಲ್ರೌಂಡರ್ ಆಗಿ ಕಾವೇರಿ ಕಾಲೇಜುವಿನ ಮನೀಶ್, ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕಾಪ್ಸ್ ತಂಡದ ಆಟಗಾರ ತಿಮ್ಮಯ್ಯ ಪಡೆದುಕೊಂಡರು.
ಬಹುಮಾನ ವಿತರಣೆ ಸಂದರ್ಭ ಕೂರ್ಗ್ ಕ್ರಿಕೆಟ್ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಕುಮಾರ್ ಅಪ್ಪಚ್ಚು, ನಿರ್ದೇಶಕ ಬಿ.ಎಂ. ಗಣೇಶ್, ಕಾಲೇಜು ಪ್ರಾಂಶುಪಾಲ ಬೆನ್ನಿಕುರಿಕೋಸ್ ಪಾಲ್ಗೊಂಡಿದ್ದರು.
ಟೂರ್ನಿಯಲ್ಲಿ ಸಿದ್ದಾಪುರ ಇಕ್ರ ಕಾಲೇಜು, ಪಾಲಿಬೆಟ್ಟ ಸರ್ಕಾರಿ ಕಾಲೇಜು, ವೀರಾಜಪೇಟೆ ಸೆಂಟ್ ಆನ್ಸ್, ಹಳ್ಳಿಗಟ್ಟು ಸಿಐಟಿ ಕಾಲೇಜು ತಂಡಗಳು ಪಾಲ್ಗೊಂಡಿದ್ದವು.
-ಸುದ್ದಿಪುತ್ರ