ಸೋಮವಾರಪೇಟೆ, ಡಿ. 15: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಗೆ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಅವರ ಆಸಕ್ತಿಯ ಮೇರೆಗೆ ಜಿ.ಪಂ.ನಿಂದ ಕೊಳವೆ ಬಾವಿ ಕೊರೆಯಿಸಲಾಯಿತು.
ಇಲ್ಲಿನ ಬಾಲಕಿಯರ ವಸತಿ ನಿಲಯದಲ್ಲಿ ಪ್ರಾರಂಭಿಸಲಾಗಿದ್ದ ಅಂಬೇಡ್ಕರ್ ವಸತಿ ಶಾಲೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರಿಸಿದ ನಂತರ ವಿದ್ಯಾರ್ಥಿಗಳಿಗೆ ಸಮರ್ಪಕ ನೀರಿನ ಕೊರತೆ ಎದುರಾಗಿತ್ತು. ಈ ಬಗ್ಗೆ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ಸ್ಥಾಯಿ ಸಮಿತಿ ಅಧ್ಯಕ್ಷ ಬೋಪಣ್ಣ ಸೇರಿದಂತೆ ಸದಸ್ಯರುಗಳು ನಿನ್ನೆ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನೀರಿನ ಸೌಕರ್ಯ ಒದಗಿಸುವ ಭರವಸೆ ನೀಡಿದ್ದರು.
ವಸತಿ ಶಾಲೆಯ ಆವರಣದಲ್ಲಿ ನೂತನವಾಗಿ ಕೊಳವೆ ಬಾವಿ ಕೊರೆಯಿಸಲಾಗಿದ್ದು, 350 ಅಡಿ ಆಳದಲ್ಲಿ ನೀರು ಲಭಿಸಿತು. ತಕ್ಷಣ ಮೋಟಾರ್ ಅಳವಡಿಸಿ ವಸತಿ ಶಾಲೆಗೆ ನೀರಿನ ಸೌಲಭ್ಯ ಒದಗಿಸಲಾಗುವದು ಎಂದು ಪೂರ್ಣಿಮಾ ಗೋಪಾಲ್ ತಿಳಿಸಿದರು.