ಕೂಡಿಗೆ, ಡಿ. 15: ಇಲ್ಲಿಗೆ ಸಮೀಪದ ಬಾಣಾವರ ವ್ಯಾಪಿಯ ಬಸಿರುಗುಪ್ಪೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಕಡಿದ 1 ಲಕ್ಷ ಮೌಲ್ಯದ ಬೀಟೆ ಮರದ ನಾಟಗಳನ್ನು ಆಟೋ ರಿಕ್ಷಾವೊಂದ ರಲ್ಲಿ ಸಾಗಿಸುತ್ತಿದ್ದ ಸಂದರ್ಭ ಸೋಮವಾರಪೇಟೆ ವಲಯದ ಅರಣ್ಯಾಧಿಕಾರಿಗಳು ಆಟೋ ರಿಕ್ಷಾ ಹಾಗೂ ಬೀಟೆಮರ ವನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಮರ ಸಾಗಾಟಕ್ಕೆ ಆಟೋ (ಕೆಎ.12.ಎ.9327) ಮತ್ತು ಬೆಂಗಾವಲಿಗೆ ಬಳಸಿದ್ದ ಮೋಟಾರ್ ಬೈಕ್ (ಕೆಎ. 12.ಎಕೆ 5285) ಆಗಿದ್ದು ಆವುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ದೊಡ್ಡಳುವಾರದ ಸುನೀಲ್, ಚಿಕ್ಕಳುವಾರದ ರಮೇಶ್ ಪರಾರಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್ಎಫ್ಒ ಲಕ್ಷ್ಮಿಕಾಂತ್ ಮಾರ್ಗದರ್ಶನದಲ್ಲಿ ಬಾಣಾವರ ಉಪವಲಯ ಅರಣ್ಯಾಧಿಕಾರಿ ಮಹದೇವನಾಯಕ ಪಿ.ಪಿ, ಅರಣ್ಯ ರಕ್ಷಕರಾದ ಹೆಚ್.ಪಿ. ರಾಜಣ್ಣ, ಅರಣ್ಯ ವೀಕ್ಷಕ ಹೆಚ್.ಆರ್.ವೀರಪ್ಪ, ವಾಹನ ಚಾಲಕ ಸಂದೀಪ್ ಹಾಗೂ ಸಿಬ್ಬಂದಿ ಇದ್ದರು.