ಸಿದ್ದಾಪುರ, ಡಿ. 16: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವಾವಲಂಬಿಗಳಾಗಿ ಯಶಸ್ಸನ್ನು ಗಳಿಸುತ್ತಿದ್ದಾರೆ. ಹಾಗೆಯೇ ಸಿದ್ದಾಪುರದ ಇತಿಹಾಸದಲ್ಲೇ ಮಹಿಳೆಯೋರ್ವರು ಆಟೋ ಚಾಲಕಿಯಾಗಿ ಸೇವೆ ಸಲ್ಲಿಸುತ್ತಿರುವದು ಎಲ್ಲರ ಗಮನ ಸೆಳೆದಿದೆ.

ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೇಕರೆ ನಿವಾಸಿ ಕುಮಾರ ಎಂಬವರ ಪತ್ನಿ, ಎರಡು ಮಕ್ಕಳ ತಾಯಿ ಸುಜಾತ (33) ಎಂಬ ಮಹಿಳೆಯು ಸ್ವಾವಲಂಬಿಯಾಗಿ ಬದುಕಬೇಕೆಂದು ಪಣತೊಟ್ಟು ಸಿದ್ದಾಪುರದಲ್ಲಿ ಆಟೋ ಚಾಲನೆ ಕಲಿತು ಇದೀಗ ಸಿದ್ದಾಪುರದಲ್ಲಿ ಆಟೋ ಚಾಲಕಿಯಾಗಿದ್ದು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಪಟ್ಟಣದಲ್ಲಿ ಸುಮಾರು 300 ಕ್ಕೂ ಅಧಿಕ ಆಟೋ ರಿಕ್ಷಾಗಳಿದ್ದು, ಎಲ್ಲರೂ ಪುರುಷರೇ ಆಗಿದ್ದು, ಈ ವರೆಗೂ ಯಾವೊಬ್ಬ ಮಹಿಳಾ ಚಾಲಕಿ ಇದ್ದ ಚರಿತ್ರೆ ಇಲ್ಲ. ಆದರೆ ಇದೀಗ ನೆಲ್ಲಿಹುದಿಕೇರಿ ನಿವಾಸಿ ಸುಜಾತ ಎಂಬಾಕೆ, ಮಹಿಳಾ ಸಂಘದ ಮುಖಾಂತರ ಸಾಲವನ್ನು ಪಡೆದುಕೊಂಡು, ಆಟೋ ಖರೀದಿಸಿ ತಾನು ಯಾರಿಗೂ ಕಡಿಮೆ ಇಲ್ಲ ಎಂದು ತೋರ್ಪಡಿಸಿ ಎಲ್ಲರಿಗೂ ಅಚ್ಚರಿ ತಂದಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಸುಜಾತ ತಾನು ಮಣ್ಣು ರಸ್ತೆಯಲ್ಲಿ ಆಟೋ ಚಾಲನೆ ಕಲಿತಿದ್ದು, ತನಗೆ ಯಾವದೇ ಅಂಜಿಕೆ, ಭಯ ಇಲ್ಲ ಎಂದರು. ಸಂಸಾರದೊಂದಿಗೆ ಜೀವನ ಸಾಗಿಸಲು ಸ್ವಯಂ ಉದ್ಯೋಗದ ಮೂಲಕ, ಭವಿಷ್ಯ ರೂಪಿಸಿಕೊಳ್ಳಲು ಸಂಘದ ಮೂಲಕ ಸಾಲ ಪಡೆದು ಆಟೋ ಖರೀದಿಸಲಾಗಿದೆ ಎಂದ ಅವರು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಕಲಿಯಬೇಕೆಂದರು.

- ಎ.ಎನ್. ವಾಸು