ಮಡಿಕೇರಿ, ಡಿ. 15: ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ದುರಂತದಿಂದ ಸಂತ್ರಸ್ತರಾದ ಹಲವು ಕುಟುಂಬಗಳಿಗೆ ಮೈಸೂರಿನ ಶ್ರೀ ಕಾವೇರಿ ಕೊಡವ ಅಸೋಸಿಯೇಷನ್ (ಈಸ್ಟ್) ಹಾಗೂ ಕೊಡಗು ಮಾಡೆಲ್ ಸ್ಕೂಲ್ ಈ ಎರಡು ಸಂಸ್ಥೆಗಳು ಸಂಗ್ರಹಿಸಿದ ತಲಾ ರೂ. 2.50 ಲಕ್ಷ (ಒಟ್ಟು 5 ಲಕ್ಷ)ಗಳ ನೆರವನ್ನು ಇಂದು ಮಡಿಕೇರಿಯಲ್ಲಿ ವಿತರಿಸಲಾಯಿತು.ಮಡಿಕೇರಿ ಕೊಡವ ಸಮಾಜದ ವಾಣಿಜ್ಯ ಸಂಕೀರ್ಣದಲ್ಲಿ ಕೊಡಗು ಸೇವಾ ಕೇಂದ್ರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎರಡು ಸಂಸ್ಥೆಗಳ ಪ್ರಮುಖರು ನೆರವು ಹಸ್ತಾಂತರಿಸಿದರು. ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕುಟುಂಬಗಳು ದಾನಿಗಳು ನೀಡುವ ಆರ್ಥಿಕ ಪರಿಹಾರವನ್ನು ಸದ್ಬಳಕೆ ಮಾಡಿಕೊಂಡು ಹೊಸ ಬದುಕು ಕಟ್ಟಿ ಕೊಳ್ಳಬೇಕೆಂದು ಕಾವೇರಿ ಕೊಡವ ಅಸೋಷಿಯೇಶನ್‍ನ ಅಧ್ಯಕ್ಷ ಬೂವಡಿರ ಎಂ. ದೇವಯ್ಯ ಸಲಹೆ ನೀಡಿದರು. ಈ ಸಂಸ್ಥೆಗಳು ಸಂಗ್ರಹಿಸಿದ ಹಣದ ಪರಿಹಾರದ ಚೆಕ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದ ಭೂ ಕುಸಿತ,
(ಮೊದಲ ಪುಟದಿಂದ) ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಹಲವು ಕುಟುಂಬಗಳು ಸಂತ್ರಸ್ತವಾಗಿವೆ. ಜಿಲ್ಲೆಯಲ್ಲಾದ ಪ್ರಕೃತಿ ವಿಕೋಪಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಶ್ರೀ ಕಾವೇರಿ ಕೊಡವ ಅಸೋಷಿಯೇಷನ್ ಸಂತ್ರಸ್ತರಿಗಾಗಿ ಮಿಡಿದ ಮನಸ್ಸುಗಳಿಂದ ಒಟ್ಟು 3 ಲಕ್ಷ ರೂ. ಸಂಗ್ರಹಿಸಿತ್ತು. ಮಾತ್ರವಲ್ಲದೇ, ಕೊಡಗು ಮಾಡೆಲ್ ಸ್ಕೂಲ್‍ನ ವಿದ್ಯಾರ್ಥಿಗಳು ಮುಕ್ತ ಮನಸ್ಸಿನಿಂದ 50 ಸಾವಿರ ರೂ. ನೆರವನ್ನು ಕೊಡಗು ಜಿಲ್ಲೆಗಾಗಿ ನೀಡಿದ್ದಾರೆ. ಈ ಹಣದಲ್ಲಿ ಕೊಡಗಿನ 7 ಸಂತ್ರಸ್ತ ಕುಟುಂಬಗಳಿಗೆ ಈ ಹಿಂದೆ ಮೈಸೂರಿನಲ್ಲಿ ಪರಿಹಾರವನ್ನು ನೀಡಲಾಗಿದೆ ಎಂದು ದೇವಯ್ಯ ಹೇಳಿದರು. ಉಳಿದ 2.5 ಲಕ್ಷ ರೂ.ಗಳನ್ನು ತಲಾ 10 ಸಾವಿರದಂತೆ 25 ಕುಟುಂಬಗಳಿಗೆ ನೀಡಲು ನಿರ್ಧರಿಸಲಾಗಿತ್ತು. ಅದರಂತೆ ಮಡಿಕೇರಿಗೆ ಆಗಮಿಸಿ ಚೆಕ್‍ಗಳನ್ನು ವಿತರಿಸುತ್ತಿದ್ದು, ಪರಿಹಾರದ ಹಣದಲ್ಲಿ ಬದುಕು ಕಟ್ಟಿಕೊಳ್ಳಲು ಚಿಂತಿಸಬೇಕೆಂದು ಸಲಹೆ ನೀಡಿದರು.
ಕಳೆದ 12 ವರ್ಷಗಳ ಹಿಂದೆ ಮೈಸೂರಿನಲ್ಲಿ ಸ್ಥಾಪನೆಯಾದ ಶ್ರೀ ಕಾವೇರಿ ಕೊಡವ ಅಸೋಷಿಯೇಷನ್ ಸಮಾಜ ಸೇವೆಯನ್ನು ಮೂಲ ಗುರಿಯಾಗಿ ಮಾಡಿಕೊಂಡಿದೆ. ಮಾತ್ರವಲ್ಲದೇ, ಕೊಡಗು ಮಾಡೆಲ್ ಸ್ಕೂಲ್ ಮೂಲಕ ವಿದ್ಯಾ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದೆ ಎಂದು ಹೇಳಿದರು.
ಶ್ರೀ ಕಾವೇರಿ ಕೊಡವ ಅಸೋಷಿಯೇಷನ್‍ನ ಉಪಾಧ್ಯಕ್ಷ ಪುಲಿಯಂಡ ಎಸ್. ದೇವಯ್ಯ, ಕೊಡಗಿನಲ್ಲಿ ಘಟಿಸಿದ ಪ್ರಕೃತಿ ವಿಕೋಪವನ್ನು ನೆನೆದು ಸಂಘ ಸಂಸ್ಥೆಗಳು ನೀಡುವ ಸಹಾಯ ಧನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತೆ ಹೇಳಿದರು.
ಮತ್ತೋರ್ವ ದಾನಿ ಟಿ. ನರಸೀಪುರ ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹದೇವ ಸ್ವಾಮಿ ಮಾತನಾಡಿ, 400 ವರ್ಷಗಳಿಂದ ಟಿ. ನರಸೀಪುರದ ಜನತೆ ಕಾವೇರಿ ನೀರು ಕುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಘಟಿಸಿದ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂತ್ರಸ್ತರಾದ ಕುಟುಂಬಗಳಿಗೆ ಸ್ಪಂದಿಸುವದು ಸಂಸ್ಥೆಯ ಋಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವತಿಯಿಂದ ರೂ. 2.5 ಲಕ್ಷಗಳನ್ನು ತಲಾ 25 ಸಾವಿರದಂತೆ 10 ಕುಟುಂಬಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಪ್ರಕೃತಿ ವಿಕೋಪವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದರೆ ಜಿಲ್ಲೆಯ ಜನತೆ ಧೃತಿಗೆಡದೆ ಧೈರ್ಯದಿಂದ ಬದುಕು ಸಾಗಿಸಬೇಕು. ಸರಕಾರ, ಸಂಘ ಸಂಸ್ಥೆಗಳು, ದಾನಿಗಳು ಸದಾ ಕಾಲ ನಿಮ್ಮೊಂದಿಗೆ ಇರುತ್ತಾರೆ ಎಂದು ಅಭಯ ನೀಡಿದರು. ಸಂತ್ರಸ್ತ ಕುಟುಂಬಗಳ ಮಕ್ಕಳಿಗೆ ವಿದ್ಯಾಭ್ಯಾಸದ ಅಗತ್ಯವಿದ್ದಲ್ಲಿ ತಮ್ಮನ್ನು ಸಂಪರ್ಕಿಸು ವಂತೆ ಮಹದೇವ ಸ್ವಾಮಿ ತಿಳಿಸಿದರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಕೊಡಗು ಸೇವಾ ಕೇಂದ್ರ ಆರಂಭಿಸಿದ ಸಂದರ್ಭ ಹಲವು ಟೀಕೆಗಳು ವ್ಯಕ್ತವಾದವು. ಆದರೆ ಸೇವಾ ಕೇಂದ್ರ ಯಾರಿಂದಲೂ ಹಣ ಸ್ವೀಕರಿಸದೇ, ನೇರವಾಗಿ ದಾನಿಗಳ ಮೂಲಕವೇ ಸಂತ್ರಸ್ತರಿಗೆ ನೆರವು ಒದಗಿಸುತ್ತಿದೆ. ಸೇವಾ ಕೇಂದ್ರದ ಮೂಲಕ ಸಂತ್ರಸ್ತರ ಹೆಸರುಗಳ ಪಟ್ಟಿಯನ್ನು ನೆರವು ನೀಡಲು ಮುಂದಾಗುವ ಸಂಘ ಸಂಸ್ಥೆಗಳಿಗೆ ನೀಡಲಾಗುತ್ತಿದ್ದು, ಪರಿಹಾರದ ಮೊತ್ತವನ್ನು ದಾನಿಗಳೇ ನಿರ್ಧರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ಬಳಿಕ ಪ್ರಕೃತಿ ವಿಕೋಪದಲ್ಲಿ ಸಂಪೂರ್ಣವಾಗಿ ತತ್ತರಿಸಿರುವ ಮಕ್ಕಂದೂರು, ಮುಕ್ಕೋಡ್ಲು, ದೇವಸ್ತೂರು, ಕಾಲೂರು, ಹೆಬ್ಬೆಟ್ಟಗೇರಿ, ಹಮ್ಮಿಯಾಲ, ಸೂರ್ಲಬ್ಬಿ, ಮದೆನಾಡು, ಮೊಣ್ಣಂಗೇರಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಒಟ್ಟು 35 ಅರ್ಹ ಸಂತ್ರಸ್ತ ಕುಟುಂಬಗಳಿಗೆ ಶ್ರೀ ಕಾವೇರಿ ಕೊಡವ ಅಸೋಷಿ ಯೇಷನ್, ಕೊಡಗು ಮಾಡೆಲ್ ಸ್ಕೂಲ್, ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಯ ಪ್ರಮುಖರು ಸೇರಿದಂತೆ ಕಾರ್ಯಕ್ರಮದಲ್ಲಿದ್ದ ಗಣ್ಯರು ಪರಿಹಾರದ ಚೆಕ್‍ಗಳನ್ನು ವಿತರಿಸಿದರು.
ಈ ಸಂದರ್ಭ ಶ್ರೀ ಕಾವೇರಿ ಕೊಡವ ಅಸೋಷಿಯೇಷನ್‍ನ ಗೌರವ ಕಾರ್ಯದರ್ಶಿ ಕಡೇಮಾಡ ಬೆಳ್ಯಪ್ಪ, ಜಂಟಿ ಕಾರ್ಯದರ್ಶಿ ಪಂದ್ಯಂಡ ಪದ್ಮ ಬೋಪಯ್ಯ, ಆಂತರಿಕ ಲೆಕ್ಕ ಪರಿಶೋಧಕ ಕೊಪ್ಪೀರ ಡಿ. ಪೊನ್ನಪ್ಪ, ಸದಸ್ಯರಾದ ಕಂಜಿತಂಡ ಮನು ಅಯ್ಯಪ್ಪ, ಪಟ್ಟಮಾಡ ಅರುಣ, ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರ, ಸಹಾಯಕ ಪ್ರಾಧ್ಯಾಪಕಿ ಕೆ.ಎಂ. ನೀಲಮ್ಮ, ಇತಿಹಾಸ ವಿಭಾಗದ ಅಧ್ಯಾಪಕಿ ರಜಿನಿ, ಕೊಡಗು ಏಕೀಕರಣ ರಂಗದ ತಮ್ಮು ಪೂವಯ್ಯ ಮತ್ತಿತ್ತರರು ಉಪಸ್ಥಿತರಿದ್ದರು.