ಮಡಿಕೇರಿ, ಡಿ. 15: ಮಡಿಕೇರಿ ತಾಲೂಕು ಪಂಚಾಯಿತಿಯ ಮಾಸಿಕ ಕೆ.ಡಿ.ಪಿ. ಸಭೆ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ಶನಿವಾರ ನಡೆಯಿತು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಅಧ್ಯಕ್ಷರು ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ಮಾತನಾಡಿ, ಇಲಾಖೆಯಡಿ ಪೂರಕ ಪೌಷ್ಟಿಕ ಆಹಾರ ಯೋಜನೆ ಶೇಕಡ 47 ರಷ್ಟು ಪ್ರಗತಿ ಸಾಧಿಸಿದೆ. ಮೆನು ಚಾರ್ಟ್‍ನಲ್ಲಿರುವಂತೆ ಮಕ್ಕಳಿಗೆ ಆಹಾರ ಕೊಡಲು ಅಂಗನವಾಡಿ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಮಾತೃಪೂರ್ಣ ಅನುಷ್ಠಾನ ಗೊಂಡಿರುವ ಅಂಗನವಾಡಿಗಳಲ್ಲಿ ಗರ್ಭಿಣಿ ಬಾಣಂತಿಯರಿಗೆ ಉಪ ಆಹಾರವನ್ನು ವಿತರಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕಾರುಗುಂದ ಶಾಲೆಗೆ ಪೇರೂರಿನಿಂದ ಬಂದಿದ್ದ ಶಿಕ್ಷಕಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲ ಎಂದು ಎಸ್.ಡಿ.ಎಂ.ಸಿ ಸದಸ್ಯರು ಆರೋಪಿಸಿದ್ದರು. ಈ ಬಗ್ಗೆ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ಅಧ್ಯಕ್ಷೆ ಶೋಭಾ ಮೋಹನ್ ಶಿಕ್ಷಣಾಧಿಕಾರಿಯನ್ನು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಅಧಿಕಾರಿ ಶಿಕ್ಷಕರಿಗೆ ನೋಟಿಸ್ ನೀಡಲಾಗಿದ್ದು, ವರ್ತನೆ ಮರುಕಳಿಸಿದ್ದಲ್ಲಿ ಶಿಸ್ತು ಕ್ರಮ ಜರುಗಿಸುದಾಗಿ ತಿಳಿಸಿದರು.

ಪಶುಪಾಲನೆ ಇಲಾಖೆಯಡಿ ಕೆಲಸ ನಿರ್ವಹಿಸಲು ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಹಂದಿ, ಹಸು, ಕೋಳಿ ಸಾಕಿ ಎನ್ನುವ ಅಧಿಕಾರಿಗಳು, ಸಾಕು ಪ್ರಾಣಿಗಳಿಗೆ ತೊಂದರೆ ಉಂಟಾದಲ್ಲಿ ಯಾವದೇ ಮುಂಜಾಗ್ರತೆಯನ್ನು ಕೈಗೊಂಡಿಲ್ಲ. ಈ ಬಗ್ಗೆ ರೈತರು ಅಸಮಾಧಾನ ವ್ಯಕ್ತ ಪಡಿಸುತ್ತಾರೆ. ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಸೂಕ್ತ ಗಮನ ಹರಿಸಬೇಕು ಎಂದು ಸಾಮಾಜಿಕ ನ್ಯಾಯ ಸಮಿತಿಯ ಕೊಡಪಾಲು ಗಣಪತಿ ಒತ್ತಾಯಿಸಿದರು.

ಪ್ರಕೃತಿ ವಿಕೋಪದ ನಂತರ ಬೀದಿ ಬದಿಯಲ್ಲಿ ಹಾಗೂ ರಸ್ತೆ ಬದಿಯಲ್ಲಿ ಸಾಕು ಪ್ರಾಣಿಗಳು ಒಡಾಡುತ್ತಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಲಕ್ಷ್ಮಿ ಅಧಿಕಾರಿಗೆ ಸೂಚಿಸಿದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಅಧಿಕಾರಿ ನಂದಿಕೋಲ್ ಮಾತನಾಡಿ, ಪ್ರಕೃತಿ ವಿಕೋಪದಲ್ಲಿ ಹಾಳಾದ ರಸ್ತೆ ಸರಿಪಡಿಸಲು ಜಿಲ್ಲಾಧಿಕಾರಿ 33 ಕೋಟಿ ರೂ ಬಿಡುಗಡೆ ಮಾಡಿದ್ದು, ಮಡಿಕೇರಿ ತಾಲೂಕಿಗೆ 15 ಕೋಟಿ ಲಭ್ಯವಾಗಿದ್ದು, ಕೆಲಸ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

26 ಗ್ರಾಮ ಪಂಚಾಯಿತಿಗೆ ಸ್ಮಶಾನ ಜಾಗ ಹಾಗೂ ಕಸವಿಲೇವಾರಿಗೆ ಜಾಗ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಸೂಚನೆ ನೀಡಲಾಗಿದೆ. ಆದರೂ ಯಾವದೇ ಪ್ರಗತಿ ಇಲ್ಲ ಎಂದು ಪಿ.ಲಕ್ಷ್ಮಿ ಕಂದಾಯ ಇಲಾಖೆಯ ಅಧಿಕಾರಿ ಗಮನಕ್ಕೆ ತಂದು, ಈ ಬಗ್ಗೆ ಶೀಘ್ರ ಕ್ರಮಕ್ಕೆ ಸೂಚಿಸಿದರು.

ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸಹಕಾರ ಇಲಾಖೆ, ಅಕ್ಷರ ದಾಸೋಹ, ಆಯುಷ್, ಸಾಮಾಜಿಕ ಅರಣ್ಯ, ಆಹಾರ, ಆರೋಗ್ಯ, ನೀರು ಮತ್ತು ನೈರ್ಮಲ್ಯ, ಸೆಸ್ಕ್, ಸರ್ವ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಯಿತು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.