ಕೂಡಿಗೆ, ಡಿ. 16: ಕೃಷಿ ಇಲಾಖೆಯ ವತಿಯಿಂದ ಬಹು ನಿರೀಕ್ಷೆಯಂತೆ ಖುಷ್ಕಿ ಬೆಳೆಗಾರರಿಗೆ ಅನುಕೂಲವಾಗುವಂತೆ ರೈತರು ಬೆಳೆಯುವ ಬೆಳೆಗಳಿಗನುಸಾರವಾಗಿ ಮಣ್ಣು ಪರೀಕ್ಷೆ ನಡೆಸಿ ಅದಕ್ಕೆ ಬೇಕಾಗುವಂತಹ ಪೌಷ್ಟಿಕ ಮತ್ತು ರಾಸಾಯನಿಕ ರಸಗೊಬ್ಬರಗಳನ್ನು ನೀಡುವದರ ಮುಖಾಂತರ ರೈತರಿಗೆ ವರದಾನವಾಗುವ ದೃಷ್ಟಿಯಿಂದ ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ 1971ರಲ್ಲಿ ಮಣ್ಣು ಆರೋಗ್ಯ ಕೇಂದ್ರವು ಪ್ರಾರಂಭಿಸಿ ಅಂದಿನಿಂದ ಇಂದಿನವರೆ ಮಣ್ಣು ಸಂರಕ್ಷಣೆ ಮತ್ತು ಮಣ್ಣು ಪರೀಕ್ಷೆಯ ಬಗ್ಗೆ ಲಕ್ಷಾಂತರ ರೈತರಿಗೆ ಮಾಹಿತಿ ಒದಗಿಸುತ್ತಾ ಬಂದಿದೆ.

ಈ ಕೇಂದ್ರವು ಕಳೆದ ಎರಡು ವರ್ಷಗಳಿಂದ ಹಾಸನ, ಮೈಸೂರು, ಚಿಕ್ಕಮಂಗಳೂರು ಸೇರಿದಂತೆ ದಕ್ಷಣ ಕನ್ನಡ ಜಿಲ್ಲೆಯ ಒಟ್ಟು 12 ತಾಲೂಕುಗಳನ್ನು ಒಳಗೊಂಡಂತಹ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೈತರ ಜಮೀನಿಗಳಿಗೆ ಅನುಕೂಲ ವಾಗುವಂತೆ ಸಕಾಲದಲ್ಲಿ ಮಣ್ಣಿನ ಆರೋಗ್ಯ ಅಭಿಯಾನದ ವಿಷಯವಾಗಿ ಮಾಹಿತಿ ನೀಡುತಿತ್ತು.

ನಂತರದ ದಿನಗಳಲ್ಲಿ ಸರಕಾರವು ಎಲ್ಲಾ ತಾಲೂಕುಗಳಿಗೂ ಪ್ರತ್ಯೇಕ ಪರೀಕ್ಷಾ ಕೇಂದ್ರಗಳನ್ನು ನಿರ್ಮಿಸಿದ ಹಿನ್ನೆಲೆಯಲ್ಲಿ ಈ ಕೇಂದ್ರವು ಕೆಲವು ವರ್ಷಗಳವರೆಗೆ ಸೋಮವಾರಪೇಟೆ ತಾಲೂಕಿಗೆ ಮೀಸಲಾಗಿದ್ದರೂ ನಂತರದ ವರ್ಷಗಳಲ್ಲಿ ಕೊಡಗಿಗೆ ಇದು ಒಂದೇ ಕೇಂದ್ರವಾಗಿತ್ತು. ತದನಂತರ ರಾಜ್ಯ ಸರ್ಕಾರದ ಹೊಸನೀತಿಯಂತೆ ಕೃಷಿ ಇಲಾಖೆಯ ಮೂಲಕ ಜಿಲ್ಲೆಗೊಂದು ಮಣ್ಣು ಆರೋಗ್ಯ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಗೆ ಕೂಡಿಗೆಯಲ್ಲಿ ಮಣ್ಣು ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ವಿವಿಧ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯಂತ್ರೋಪಕರಣ ಮತ್ತು ಕಂಪ್ಯೂಟರೀಕರಣಗೊಳಿಸುವ ಮೂಲಕ ಜಿಲ್ಲೆಯ ರೈತರಿಗೆ ಈ ಕೇಂದ್ರವು ಸಹಕಾರಿಯಾಗಿದೆ. ಮಣ್ಣು ಪರೀಕ್ಷೆಗಾಗಿ ಪ್ರಯೋಗಾಲಯ ಉಪಕರಣಗಳು ಸೇರಿದಂತೆ ಸುಮಾರು 1 ಎಕರೆ ಭೂಮಿಯಲ್ಲಿ ಇದಕ್ಕೆ ಬೇಕಾದ ಕಟ್ಟಡಗಳು ಮತ್ತು ನೌಕಕರಿಗೆ ವಸತಿ ಗೃಹಗಳನ್ನು ನಿರ್ಮಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ಈ ಕಟ್ಟಡವನ್ನು ನವೀಕರಣಗೊಳಿಸಿ, ಮಣ್ಣು ಪರೀಕ್ಷೆಗೆ ಬೇಕಾಗುವ ಆಧುನಿಕ ಯಂತ್ರೋಪ ಕರಣಗಳನ್ನು ಅಳವಡಿಸಿದೆ. ಈ ಸಂಸ್ಥೆಯಲ್ಲಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಡಾ. ಹೆಚ್.ಎಸ್. ರಾಜಶೇಖರ್, ಸಿಬ್ಬಂದಿ ಗಳಾದ ದೀಪಕ್, ಅಂಕಿತ, ನಂದೀಶ್ ಸೇರಿದಂತೆ 6 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಕೇಂದ್ರದಲ್ಲಿ ಮಣ್ಣು ಮಾದರಿ ವಿಶ್ಲೇಷಣೆ ಹಾಗೂ ನೀರು ಮಾದರಿ ವಿಶ್ಲೇಷಣೆಯನ್ನು ಸಕಾಲದಲ್ಲಿ ಮಾಡಿಕೊಡಲಾಗುವದು. ಈ ಸಾಲಿನಲ್ಲಿ 45 ಸಾವಿರ ರೈತರ ಜಮೀನಿನಲ್ಲಿ ಕೃಷಿ ಇಲಾಖೆ ಮೂಲಕ ಮಣ್ಣು ತಂದು ರೈತರಿಂದ ಮಣ್ಣು ಪರೀಕ್ಷಾ ಶುಲ್ಕವಾಗಿ 8 ರೂಪಾಯಿ ಪಡೆದು ಮಣ್ಣು ಪರೀಕ್ಷೆ ಮಾಡಿಕೊಡಲಾಗುತ್ತಿದೆ. ಅಲ್ಲದೆ, ಸ್ವತಃ ರೈತರು ಈ ಕೆಂದ್ರಕ್ಕೆ ತಂದು ಮಣ್ಣು ಆರೋಗ್ಯ ಪರೀಕ್ಷೆ ಮಾಡಿಸಿದ್ದಲ್ಲಿ 200 ರೂ, ನೀರಿನ ಮಾದರಿ ವಿಶ್ಲೇಷಣೆಗೆ 100 ರೂ ಗಳನ್ನು ಪಡೆಯಲಾಗುತ್ತಿದೆ. ಮಣ್ಣು ಪರೀಕ್ಷೆಯಿಂದ ಜಮೀನಿನ ಮಣ್ಣಿನ ರಸ ಮತ್ತು ಮಣ್ಣಿನ ಲವಣಾಂಶವನ್ನು ಗುರುತಿಸಿ ಅದರನುಗುಣವಾಗಿ ರಸಗೊಬ್ಬರ ಮತ್ತು ಸಾವಯವಗೊಬ್ಬರಗಳನ್ನು ಭೂಮಿಗೆ ಬಳಸಲು ಈ ಮಣ್ಣಿನ ಆರೋಗ್ಯ ಕೇಂದ್ರದಿಂದ ಪ್ರಯೋಜನ ವಾಗುತ್ತಿದೆ. 2017-18ನೇ ಸಾಲಿನಲ್ಲಿ ಜಿಲ್ಲೆಯ ರೈತರು ಕಾಫಿ, ಕಾಳುಮೆಣಸು, ಭತ್ತ, ಬಾಳೆ, ಅಡಿಕೆ, ಏಲಕ್ಕಿ ಬೆಳೆಯಲು ಜಮೀನಲ್ಲಿ ಮಣ್ಣು ಮಾದರಿ ಸಂಗ್ರಹಿಸಿ ಪರೀಕ್ಷಿಸಿಕೊಂಡು ಮಣ್ಣು ಆರೋಗ್ಯ ಚೀಟಿಯನ್ನು ಪಡೆದುಕೊಂಡು ಅದರನುಗುಣವಾಗಿ ಜಮೀನಿಗೆ ಹುಳಿ ಮಣ್ಣಿಗೆ ಸುಣ್ಣ ಹಾಕುವದು, ಮಾಗಿ ಉಳಿಮೆ ಮಾಡುವದು, ಕಾಂಪೋಸ್ಟ್ ಹಸಿರೆಲೆ ಗೊಬ್ಬರ ಬಳಸಬೇಕು.

ಇದೀಗ ಕೂಡಿಗೆಯಲ್ಲಿರುವ ಮಣ್ಣು ಆರೋಗ್ಯ ಕೇಂದ್ರವು ಮಣ್ಣು ಆರೋಗ್ಯ ಅಭಿಯಾನದಡಿಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಮಣ್ಣು ಸಂಗ್ರಹಣೆಯ ವಿಧಾನ ಮತ್ತು ಮಣ್ಣು ಪರೀಕ್ಷೆಯ ಮಹತ್ವವನ್ನು ಆಯಾ ಗ್ರಾಮಗಳಲ್ಲಿ ರೈತರಿಗೆ ತಿಳಿಸ ಲಾಗುತ್ತಿದೆ. ರೈತರು ತಮ್ಮ ಜಮೀನಿ ನಿಂದ ಮಣ್ಣು ಆರೋಗ್ಯ ಕೇಂದ್ರಕ್ಕೆ ತಂದುಕೊಟ್ಟ ನಾಲ್ಕು ದಿನಗಳಲ್ಲಿ ಮಣ್ಣು ಆರೋಗ್ಯವನ್ನು ವಿವಿಧ ತಂತ್ರಜ್ಞಾನದ ಮೂಲಕ ಪರೀಕ್ಷಿಸಿ, ಗಣಕೀಕೃತವಾಗಿ ಮಣ್ಣು ಆರೋಗ್ಯ ಚೀಟಿಯನ್ನು ರೈತರಿಗೆ ನೀಡಲಾ ಗುತ್ತಿದೆ. ಮಣ್ಣು ಆರೋಗ್ಯ ಚೀಟಿಯು ವಿವಿಧ ಇಲಾಖೆಯಿಂದ ರೈತರು ವಿವಿಧ ಸವಲತ್ತುಗಳನ್ನು ಪಡೆಯಲು ಸಹಕಾರಿಯಾಗಿದೆ ಎಂದು ಮಣ್ಣು ಆರೋಗ್ಯ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದೀಗ ಭತ್ತದ ಬೆಳೆ ಕಟಾವು ಆಗಿ ಡಿಸೆಂಬರ್ ತಿಂಗಳು ಆಗಿರುವದಿಂದ ರೈತರು ಜೂನ್ ತಿಂಗಳಲ್ಲಿ ಬೇಸಾಯ ಮಾಡಲು ಸಿದ್ಧರಾಗುವ ಮುನ್ನ ಜಮೀನಿನ ಮಣ್ಣನ್ನು ಮಣ್ಣು ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿ ಅದಕ್ಕೆ ಬೇಕಾಗುವ ಪ್ರಧಾನ ಪೋಷಕಾಂಶ, ಲವಣಾಂಶ, ಲಘು ಪೋಷಕಾಂಶಗಳ ಬಗ್ಗೆ ಮಾಹಿತಿ ಪಡೆದು ಅದರನುಗುಣವಾಗಿ ಬೇಸಾಯ ಮಾಡಿದ್ದಲ್ಲಿ ಫಲವತ್ತತೆ ಯನ್ನು ಉತ್ತಮ ಪಡಿಸಿಕೊಳ್ಳಲು ಸಹಕಾರಿಯಾಗುವದು. ಅತ್ಯಾಧುನೀಕ ಮಣ್ಣು ಪ್ರಯೋಗಾಲಯ, ತಂತ್ರಜ್ಞಾನ ಹಾಗೂ ಸಹ ಇರುವದರಿಂದ ರೈತರು ತಮ್ಮ ಜಮೀನಿನ ಮಣ್ಣುಗಳನ್ನು ಕೂಡಿಗೆ ಮಣ್ಣು ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿ, ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಮಣ್ಣಿನ ಗುಣಗಳನ್ನು ವಿವಿಧ ಹಂತಗಳಲ್ಲಿ ಪರೀಕ್ಷಿಸಿ ಅದಕ್ಕನುಗುಣವಾಗಿ ಬೇಸಾಯ ಮಾಡಲು ರಸಗೊಬ್ಬರ ಮತ್ತು ಸಾವಯವ ಗೊಬ್ಬರವನ್ನು ಬಳಕೆ ಮಾಡಲು ತಿಳಿಸಲಾಗುವದು. ಇದರ ಮೂಲ ರೈತರು ತಮ್ಮ ಕೃಷಿ ಭೂಮಿಯಲ್ಲಿ ಉತ್ತಮ ಬೆಳೆಯನ್ನು ಬೆಳೆಯಲು ಅನುಕೂಲಕರವಾಗುತ್ತದೆ. ಆದ್ದರಿಂದ ರೈತರು ಪ್ರಯೋಜನವನ್ನು ಸದ್ಬಳಸಿಕೊಳ್ಳಬೇಕು ಎಂದು ಡಾ. ಹೆಚ್.ಎಸ್. ರಾಜಶೇಖರ್ ಹೇಳಿದ್ದಾರೆ.

-ಕೆ.ಕೆ. ನಾಗರಾಜಶೆಟ್ಟಿ.