ಶ್ರೀಮಂಗಲ, ಡಿ. 16: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಅತೀ ಹೆಚ್ಚು ಮಳೆಯಾಗಿದ್ದು, ಈ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದೆ. ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಈ ವ್ಯಾಪ್ತಿಯಲ್ಲಿ ದೂರವಾಣಿ ಸಂಪರ್ಕ ಸಹ ಅಭಿವೃದ್ಧಿ ಕಂಡಿಲ್ಲ. ಇರುವ ದೂರವಾಣಿ ಸೇವೆ ಅತ್ಯಂತ ದುಸ್ಥಿತಿಯಲ್ಲಿದ್ದು, ಜನರ ನಡುವೆ ಮಾಹಿತಿ ಸಂಪರ್ಕಕ್ಕೂ ತೊಂದರೆಯಾಗಿದೆ. ಜಿಲ್ಲಾಧಿಕಾರಿ ಬಿರುನಾಣಿ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ಜನತೆಯ ಸಭೆ ಕರೆಯುವಂತೆ ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಒತ್ತಾಯಿಸಿದ್ದಾರೆ.
ಅತಿವೃಷ್ಟಿಗೆ ತುತ್ತಾಗಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮೀಣ ರಸ್ತೆಗಳು ತೀವ್ರವಾಗಿ ಹಾನಿಯಾಗಿವೆ. ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆಯನ್ನು ತಳೆಯಬಾರದು. ಜಿಲ್ಲಾಧಿಕಾರಿಗಳು ಮಳೆಹಾನಿ ಅನುದಾನದಡಿ ಈ ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಹೇಳಿದರು
ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ 5 ಗ್ರಾಮಗಳಲ್ಲಿ ಸರಿಯಾದ ದೂರವಾಣಿ ಸಂಪರ್ಕ ಇಲ್ಲದೆ ಜನರು ಪರದಾಡುವ ಸ್ಥಿತಿ ಎದುರಾಗಿದೆ. ಬಿ.ಎಸ್.ಎನ್.ಎಲ್. ಹಾಗೂ ಖಾಸಗಿ ಮೊಬೈಲ್ ಸೇವೆ ಈ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗುವ ಬದಲು ದುಸ್ಥಿತಿಗೆ ತಲಪಿವೆ ದೂರವಾಣಿ ಸಂಪರ್ಕ ಅಭಿವೃದ್ಧಿ ಪಡಿಸಲು ಟವರ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಎಸ್.ಟಿ. ಬುಡಕಟ್ಟು ಜನಾಂಗಕ್ಕೆ ವಿತರಿಸುತ್ತಿದ್ದ ಪೌಷ್ಟಿಕ ಆಹಾರ ಎರಡು ತಿಂಗಳಿನಿಂದ ಸ್ಥಗಿತಗೊಂಡಿದೆ. ಇದನ್ನು ಕೂಡಲೇ ವಿತರಿಸಬೇಕು. ಗ್ರಾ.ಪಂ. ಗೆ ಖಾಯಂ ಪಿ.ಡಿ.ಓ. ಇಲ್ಲದೆ ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆಯಾಗಿದೆ. ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಶಾಶ್ವತ ಯೋಜನೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಬಲ್ಯಮಿದೇರಿರ ಚಂಗಪ್ಪ, ಮೋಹನ್‍ಕುಮಾರ್ ಹಾಜರಿದ್ದರು.