ಸೋಮವಾರಪೇಟೆ, ಡಿ. 16: ಸಾಹಿತ್ಯ ಚಟುವಟಿಕೆಗಳು ನಿಂತ ನೀರಾಗದೇ ಹರಿಯುವ ತೊರೆಯಾಗಬೇಕೆಂದು 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಹಾಗೂ ಹಿರಿಯ ಸಾಹಿತಿ ಜಲಾ ಕಾಳಪ್ಪ ಅಭಿಪ್ರಾಯಿಸಿದರು.

ಇಲ್ಲಿನ ಸೃಷ್ಟಿಯ ಚಿಗುರು ಕವಿ ಬಳಗ ಮತ್ತು ಮನೆ ಮನೆ ಕಾವ್ಯಗೋಷ್ಠಿ ಬಳಗದ ಆಶ್ರಯದಲ್ಲಿ ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕವಿಗೋಷ್ಠಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗಿನ ಮನೆಮನೆಗಳಲ್ಲಿ ಕವಿ-ಸಾಹಿತಿಗಳು ಹಾಗೂ ಬರಹಗಾರರಿದ್ದು, ಹಲವಷ್ಟು ಮಂದಿ ಸೂಕ್ತ ಪ್ರೋತ್ಸಾಹದ ಕೊರತೆಯಿಂದ ಹಿಂದೆ ಉಳಿದಿದ್ದಾರೆ. ಅಂತಹವರಿಗೆ ಪ್ರೋತ್ಸಾಹ ನೀಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕರೆತರುವ ಕೆಲಸ ಆಗಬೇಕು. ಬರವಣಿಗೆಗಳು ಮುಕ್ತವಾಗಿರಬೇಕೆಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವದರಿಂದ ಉತ್ತಮ ಸಂಸ್ಕಾರ ದೊರೆಯುತ್ತದೆ. ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಒಲವು ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.

ಮನೆಮನೆ ಕಾವ್ಯಗೋಷ್ಠಿಯ ಸಂಚಾಲಕ ವೈಲೇಶ್ ಅವರು ಪ್ರಾಸ್ತಾವಿಕ ಮಾತನಾಡಿ, ಬರವಣಿಗೆಗಳು ಸ್ವ ವಿಮರ್ಶೆಗೆ ಒಳಪಡಬೇಕು. ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಸಾಗಬೇಕು. ಜಿಲ್ಲೆಯಲ್ಲಿ ಕವಿಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕು ಎಂದರು.

ಮತ್ತೋರ್ವ ಅತಿಥಿ, ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಎ. ಮುರಳೀಧರ್ ಮಾತನಾಡಿ, ಮನೆಮನೆಗೆ ಕನ್ನಡ ಸಾಹಿತ್ಯ ತಲಪಿಸುವ ಕಾರ್ಯ ಆಗಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚು ಸಾಹಿತ್ಯಪರ ಚಟುವಟಿಕೆ ನಡೆಯಬೇಕು ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೃಷ್ಟಿಯ ಚಿಗುರು ಕವಿ ಬಳಗದ ಅಧ್ಯಕ್ಷ ಕೆ.ಪಿ. ಸುದರ್ಶನ್ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ರೋಟರಿ ಸಂಸ್ಥೆ ಅಧ್ಯಕ್ಷ ಪಿ.ಕೆ. ರವಿ, ಕೋಶಾಧಿಕಾರಿ ಎ.ಪಿ. ವೀರರಾಜು, ಸರ್ಕಾರಿ ಪ್ರೌಢಶಾಲಾ ಉಪ ಪ್ರಾಂಶುಪಾಲ ಮಹದೇವಪ್ಪ ತಳವಾರ್, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಅಣ್ಣಮ್ಮ, ಹಿರಿಯ ಸಾಹಿತಿ ನ.ಲ. ವಿಜಯ, ಕಸಾಪ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗಾಯಕ ಟಿ.ಡಿ. ಮೋಹನ್, ರಾಷ್ಟ್ರಪ್ರಶಸ್ತಿ ವಿಜೇತ ಕಲಾವಿದರಾದ ಬಿ.ಆರ್. ಸತೀಶ್ ಅವರಿಂದ ಮೂಡಿಬಂದ ಕುಂಚಗಾಯನ, ನಾಟ್ಯ ಮಿಲನ ಶಾಲೆಯ ಮಕ್ಕಳಿಂದ ನಡೆದ ಸಮೂಹ ನೃತ್ಯ ಕಾರ್ಯಕ್ರಮ ಎಲ್ಲರ ಮನ ರಂಜಿಸಿತು.

ಕವಿ ಬಳಗದಿಂದ ಸನ್ಮಾನ : ಸಾಹಿತ್ಯ, ಶೈಕ್ಷಣಿಕ, ಸಮಾಜಸೇವೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಇಲ್ಲಿನ ಸೃಷ್ಟಿಯ ಚಿಗುರು ಕವಿ ಬಳಗ ಮತ್ತು ಮನೆ ಮನೆ ಕಾವ್ಯಗೋಷ್ಠಿ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಪಿ.ಕೆ. ರವಿ, ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಹಿರಿಯ ಸಾಹಿತಿ ಜಲಾ ಕಾಳಪ್ಪ, ಜಾನಪದ ಪರಿಷತ್ ಹೋಬಳಿ ಅಧ್ಯಕ್ಷ ಮುರಳೀಧರ್, ಉಪ ಪ್ರಾಂಶುಪಾಲ ಮಹದೇವಪ್ಪ ತಳವಾರ್, ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಮುಖ್ಯೋಪಾಧ್ಯಾಯಿನಿ ಅಣ್ಣಮ್ಮ, ಕಸಾಪ ಕೋಶಾಧಿಕಾರಿ ಎ.ಪಿ. ವೀರರಾಜ್ ಅವರುಗಳನ್ನು ಅಭಿನಂದಿಸಲಾಯಿತು.

ಕಾವ್ಯ ಗೋಷ್ಠಿ ಬಳಗದ ಸಂಚಾಲಕ ವೈಲೇಶ್, ಕವಿ ಬಳಗದ ಅಧ್ಯಕ್ಷ ಸುದರ್ಶನ್, ಪದಾಧಿಕಾರಿಗಳಾದ ರಾಚು ಶ್ಯಾಂ, ನ.ಲ. ವಿಜಯ, ಎಂ.ಎ. ರುಬೀನಾ, ಅಶ್ವಿನಿ, ಆಶಾ, ವಾಸಂತಿ, ದೀಪಿಕಾ, ಸುಮತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.