ಗೋಣಿಕೊಪ್ಪ ವರದಿ, ಡಿ. 15 : ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ಆರಂಭಗೊಂಡಿರುವ ಎ. ಡಿವಿಜóನ್ ಹಾಕಿ ಲೀಗ್‍ನಲ್ಲಿ ಎಂ.ಆರ್.ಎಫ್. ಮೂರ್ನಾಡ್ ತಂಡ 7 ಗೋಲುಗಳನ್ನು ಹೊಡೆದು ದಾಖಲೆ ನಿರ್ಮಿಸಿತು. ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡ 2 ಜಯ ಸಾಧನೆ ಮಾಡಿತು.

ಶನಿವಾರ ನಡೆದ ಪಂದ್ಯಗಳಲ್ಲಿ ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್, ಎಂ.ಆರ್.ಎಫ್. ಮೂರ್ನಾಡ್ ಹಾಗೂ ಟಾಟಾ ಕಾಫಿ ತಂಡಗಳು ಗೆಲವಿನ ನಗೆ ಬೀರಿದವು. ಕೋಣನಕಟ್ಟೆ ಇಲೆವೆನ್, ಮಲೆನಾಡ್ ಹುದಿಕೇರಿ, ಬಿಬಿಸಿ ಹಾಗೂ ಡಾಲ್ಪಿನ್ಸ್ ತಂಡಗಳು ಸೋಲನುಭವಿಸಿದವು.

ಎಂ.ಆರ್.ಎಫ್. ಮೂರ್ನಾಡ್ ತಂಡ ಬಿಬಿಸಿ ತಂಡವನ್ನು 7-0 ಗೋಲುಗಳ ಮೂಲಕ ಸೋಲಿಸಿತು. 24, 32 ಹಾಗೂ 34 ರಲ್ಲಿ ಪ್ರಜ್ವಲ್ ತಲಾ 3 ಗೋಲು, 2 ಹಾಗೂ 17 ರಲ್ಲಿ ಪುನಿತ್, 23 ಹಾಗೂ 25 ರಲ್ಲಿ ಯಾಸಿರ್ ತಲಾ 2 ಗೋಲು ಬಾರಿಸಿದರು. ಮೂರ್ನಾಡ್ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲವು ದಾಖಲಿಸಿ ಮುನ್ನಡೆ ಕಾಯ್ದುಕೊಂಡಿದೆ.

ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ಶನಿವಾರ ಆಡಿದ ಎರಡು ಪಂದ್ಯಗಳಲ್ಲೂ ಜಯ ಸಾಧನೆ ಮಾಡಿತು. ಕೋಣನಕಟ್ಟೆ ಇಲೆವೆನ್ ಹಾಗೂ ಮಲೆನಾಡ್ ಹುದಿಕೇರಿ ತಂಡವನ್ನು ಮಣಿಸಿತು. ಕೋಣನಕಟ್ಟೆ ಇಲೆವೆನ್ ತಂಡದ ಎದುರು 3-2 ಗೋಲುಗಳಿಂದ ಜಯ ಪಡೆದ ಕೂಡಿಗೆ, ಪರ 18 ಹಾಗೂ 45 ನೇ ನಿಮಿಷಗಳಲ್ಲಿ ಕಿರಣ್ 2 ಗೋಲು, 44 ರಲ್ಲಿ ರೋಹಿತ್ ಗೋಲು ಹೊಡೆದರು. ದಿನದ ಕೊನೆಯಲ್ಲಿ ಮಲೆನಾಡ್ ವಿರುದ್ಧ ಆಡಿದ ಪಂದ್ಯದಲ್ಲಿಯೂ 3-1 ಗೋಲುಗಳ ಜಯ ಸಾಧನೆ ಮಾಡಿತು. ಕೂಡಿಗೆ ಪರ 37, 48 ನೇ ನಿಮಿಷದಲ್ಲಿ ಯಶ್ವಂತ್, 39 ರಲ್ಲಿ ತರುಣ್, ಕೋಣನಕಟ್ಟೆ ಪರ 28 ರಲ್ಲಿ ಅಚ್ಚಪ್ಪ, 42 ರಲ್ಲಿ ಸಾವನ್, ಮಲೆನಾಡ್ ಪರ 17 ನೇ ನಿಮಿಷದಲ್ಲಿ ನೀಲ್ ತಲಾ ಒಂದೊಂದು ಗೋಲು ಬಾರಿಸಿದರು.

ಟಾಟಾ ಕಾಫಿ ತಂಡವು ಡಾಲ್ಫಿನ್ಸ್ ವಿರುದ್ಧ 4-0 ಗೋಲುಗಳ ಜಯ ಸಾಧನೆ ಮಾಡಿತು. ಟಾಟಾ ಪರ ಇಬ್ಬರು ಆಟಗಾರರುಗಳಾದ 6, 55 ನೇ ನಿಮಿಷದಲ್ಲಿ ಕಿರಣ್, 10, 19 ರಲ್ಲಿ ಶಿರಾಗ್ ತಲಾ ಗೋಲು ಹೊಡೆದರು.

- ಸುದ್ದಿಪುತ್ರ