ಮಡಿಕೇರಿ, ಡಿ. 16: ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕೆಲವು ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಖಂಡಿಸುವದಾಗಿ ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ತಿಳಿಸಿದೆ.

ಸೋಮವಾರಪೇಟೆಯಲ್ಲಿ ನಡೆದ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುವದು ಸರಿಯಾದ ಕ್ರಮವಲ್ಲವೆಂದರು.

ಹೆದ್ದಾರಿ ಕಾಮಗಾರಿಯನ್ನು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಶೀಘ್ರ ಆರಂಭಿಸುವಂತೆ ಸಂಬಂಧಪಟ್ಟವರನ್ನು ಒತ್ತಾಯಿಸಲು ಸಭೆ ನಿರ್ಣಯ ಕೈಗೊಂಡಿತು.

ಕರ್ನಾಟಕ ರಾಜ್ಯ ಒಕ್ಕಗಲಿಗರ ಸಂಘದ ಆಡಳಿತ ಮಂಡಳಿಯ ಚುನಾವಣೆ 2019ರಲ್ಲಿ ನಡೆಯಲಿದ್ದು, ಕೊಡಗು ಜಿಲ್ಲೆಯಿಂದ ಒಮ್ಮತದ ಅಭ್ಯರ್ಥಿಗಳನ್ನು ಕಣಕಿಳಿಸುವ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಮತ್ತೊಂದು ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು.

ಸಂಘದ ವಾರ್ಷಿಕ ಮಹಾಸಭೆಯನ್ನು ಜ. 12 ರಂದು ವೀರಾಜಪೇಟೆಯಲ್ಲಿ ನಡೆಸಲು ನಿರ್ಧರಿಸಿದ್ದು, ಏಷ್ಯನ್ ಗೇಮ್ಸ್‍ನಲ್ಲಿ ರಜತ ಪದಕ ಪಡೆದ ಕೆ.ಎಸ್. ಜೀವನ್ ಅವರನ್ನು ಈ ಸಭೆಯಲ್ಲಿ ಸನ್ಮಾನಿಸಲಾಗುವದೆಂದು ಚಂಗಪ್ಪ ತಿಳಿಸಿದರು.

ಹತ್ತನೇ ತರಗತಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿರುವ ಒಕ್ಕಲಿಗ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿಯನ್ನು ತಾ. 31 ರೊಳಗೆ ಸಂಘದ ಅಧ್ಯಕ್ಷರು ಹಾಗೂ ಗೌರವ ಕಾರ್ಯದರ್ಶಿಗಳು, ಕೊಡಗು ಜಿಲ್ಲಾ ಒಕ್ಕಲಿಗರ ಸಂಘ, ಗಣಪತಿ ಬೀದಿ, ಮಡಿಕೇರಿ ಈ ವಿಳಾಸಕ್ಕೆ ಅಂಚೆ ಮೂಲಕ ತಲಪಿಸುವಂತೆ ಚಂಗಪ್ಪ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ 8762345577, 9448976406 ಸಂಪರ್ಕಿಸಬಹುದಾಗಿದೆ. ಸಭೆಯಲ್ಲಿ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.