ಕರಿಕೆ, ಡಿ. 16: ದೇಶ ಸ್ವತಂತ್ರಗೊಂಡು ಎಪ್ಪತ್ತು ವರ್ಷಗಳು ಕಳೆದರೂ ರಾಜ್ಯದ ಗಡಿ ಜಿಲ್ಲೆ ಕೊಡಗಿನ ಗಡಿ ಗ್ರಾಮ ಕರಿಕೆ ಇನ್ನೂ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವದು ಇಂದಿನ ಆಧುನಿಕ ಯುಗದಲ್ಲಿ ನಾಗರಿಕ ಸಮಾಜ ನಿಜಕ್ಕೂ ತಲೆತಗ್ಗಿಸುವ ವಿಚಾರವಾಗಿದೆ.ಜಿಲ್ಲಾಕೇಂದ್ರ ಮಡಿಕೇರಿಯಿಂದ ಸುಮಾರು ಎಪ್ಪತ್ತು ಕಿ.ಮೀ. ದೂರದಲ್ಲಿರುವ ಕರಿಕೆ ಗ್ರಾಮವು ಭಾಗಮಂಡಲದಿಂದ ಮೂವತ್ತು ಕಿ.ಮೀ. ದೂರದಲ್ಲಿದೆ. ಹದಿನೈದು ಕಿ.ಮೀ. ದಟ್ಟ ಅರಣ್ಯ ಪ್ರದೇಶದ ಹದಗೆಟ್ಟ ರಸ್ತೆ ಹಾಗೂ ಗುಡ್ಡಗಾಡುಗಳ ಮಧ್ಯದಲ್ಲಿ ದ್ವೀಪದಂತಿದೆ. ಸುಮಾರು ಐದು ಸಾವಿರ ಜನಸಂಖ್ಯೆ, ಹನ್ನೆರಡು ಅಂಗನವಾಡಿಕೇಂದ್ರ,ಒಂದು ಆಶ್ರಮ ಶಾಲೆ, ಮೂರು ಪ್ರಾಥಮಿಕ ಶಾಲೆ, ಪೊಲೀಸ್ ಉಪಠಾಣೆ, ಅರಣ್ಯ ನಿರೀಕ್ಷಣಾ ಮಂದಿರ, ತನಿಖಾ ಠಾಣೆ, ಗ್ರಂಥಾಲಯ, ಸಹಕಾರಿ ಸಂಘ, ನ್ಯಾಯಬೆಲೆ ಅಂಗಡಿ, ಅಂಚೆ ಕಚೇರಿ ಮುಂತಾದವುಗಳನ್ನೂ ಹೊಂದಿದ್ದರೂ, ಗ್ರಾಮದ ಜನತೆ ಅನಾರೋಗ್ಯ ಪೀಡಿತ ಸಂದರ್ಭದಲ್ಲಿ ಚಿಕಿತ್ಸೆಗೆ ಮಾತ್ರ ಸುಮಾರು ಐವತ್ತು ಕಿ.ಮೀ ದೂರದ ನೆರೆಯ ಕೇರಳ ರಾಜ್ಯ ಅಥವಾ ಮೂವತ್ತು ಕಿ.ಮೀ ದೂರದಲ್ಲಿರುವ ದ.ಕ. ಜಿಲ್ಲೆಯ ಆಸ್ಪತ್ರೆಗಳನ್ನು ಅವಲಂಬಿಸುವಂತಾಗಿದೆ. ಸರಕಾರದ ಕಾರ್ಯ ವೈಖರಿಗೆ ಇದು ಕನ್ನಡಿಯಾಗಿದೆ. ಸ್ಥಳೀಯ ಗ್ರಾಮ ಪಂಚಾಯತಿ ಕಛೇರಿಯ ಕೂಗಳತೆ ದೂರದಲ್ಲಿ ಭಾಗಮಂಡಲ- ಕರಿಕೆ ಅಂತರ್ ರಾಜ್ಯ ಹೆದ್ದಾರಿ ಬದಿಯ ಎಳ್ಳುಕೊಚ್ಚಿ ಎಂಬಲ್ಲಿ ಸ್ಥಳ ದಾನಿಗಳ ನೆರವಿನಿಂದ ಹತ್ತಾರು ವರ್ಷಗಳ ಹಿಂದೆ ಸ್ವಂತ ಕಟ್ಟಡದಲ್ಲಿ ಆಸ್ಪತ್ರೆ ಆರಂಭ ಗೊಂಡಿತ್ತು. ಕಾರಣಾಂತರ ಗಳಿಂದ ಅದು ಆಯುರ್ವೇದ ಆಸ್ಪತ್ರೆಯಾಗಿ ಪರಿವರ್ತನೆ ಯಾಗಿ ಇದೀಗ ಕಾರ್ಯ ನಿರ್ವಹಿಸುತ್ತದೆ. ವಾರದಲ್ಲಿ ಒಂದುದಿನ ನಿಯೋಜನೆಯ ಮೇರೆಗೆ ಆಯುರ್ವೇದ ವೈದ್ಯಧಿಕಾರಿ ಮತ್ತು ಭಾಗಮಂಡಲದ ವೈದ್ಯಧಿಕಾರಿಗಳು ಭೇಟಿ ನೀಡುತ್ತಾರೆ. ತುರ್ತು ಸಂದರ್ಭದಲ್ಲಿ ಇವರಿಗೆ ಕರ್ತವ್ಯಕ್ಕೆ ಆಗಮಿಸುವದು ಕಷ್ಟವಾಗಿರುತ್ತದೆ. ಇನ್ನೂಳಿದ ದಿನಗಳಲ್ಲಿ ದಿನಗೂಲಿ ಆಯಾ ಮಾತ್ರ ಆಸ್ಪತ್ರೆಯನ್ನು ನಿರ್ವಹಣೆ ಮಾಡುವ ಪರಿಸ್ಥಿತಿ ನಿಜಕ್ಕೂ ದುರಂತವೇ ಸರಿ. ಇತ್ತೀಚಿನ ವರ್ಷಗಳಲ್ಲಿ ಡೆಂಗ್ಯು, ಚಿಕನ್ ಗುನ್ಯ ಇಲಿ ಜ್ವರದಂತ ಮಾರಣಾಂತಿಕ ಖಾಯಿಲೆಗಳು ಕಾಣಿಸಿಕೊಂಡು; ಅನೇಕ ಸಾವು ನೋವು ಸಂಭವಿಸಿದ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಯ ಮನವಿ ಹಾಗೂ ಪ್ರಯತ್ನದಿಂದ ಹಿಂದಿನ ಸರಕಾರದ ಅವಧಿಯಲ್ಲಿ ಒಂದು ಅಲೋಪಥಿ ಪ್ರಾಥಮಿಕ ಕೇಂದ್ರ ಪೂರ್ಣ ಪ್ರಮಾಣದಲ್ಲಿ
(ಮೊದಲ ಪುಟದಿಂದ) ಮಂಜೂರರಾಗಿದ್ದು, ಒರ್ವ ವೈದ್ಯ ಹಾಗೂ ಇಬ್ಬರು ದಾದಿಯರು ಮತ್ತು ಇತರೆ ಸಿಬ್ಬಂದಿಗಳ ನೇಮಕಾತಿಗೆ ಸರಕಾರ ಮಂಜೂರಾತಿ ನೀಡಿದೆ. ಅದು ಕೇವಲ ಮಂಜೂರಾತಿಯಾಗಿಯೇ ಸರಕಾರದ ಕಡತದಲ್ಲಿ ಉಳಿದಿದೆ.ಆಸ್ಪತ್ರೆಯು ಆವರಣ ಗೋಡೆ ಸೇರಿದಂತೆ ವಿಸ್ತಾರವಾದ ಒಂದು ಎಕರೆ ಪ್ರದೇಶವನ್ನು ಹೊಂದಿದ್ದು, ವೈದ್ಯರು ಹಾಗೂ ಸಿಬ್ಬಂದಿಗಳಿಗೆ ತಂಗಲು ಸುಸಜ್ಜಿತವಾದ ನಾಲ್ಕು ವಸತಿಗೃಹಗಳಿದ್ದು, ಕುಡಿಯುವ ನೀರಿನ ಬಾವಿಯನ್ನು ಹೊಂದಿದೆ. ಇತ್ತೀಚೆಗೆ ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಶೌಚಾಲಯ ನಿರ್ಮಾಣ ಮಾಡಿದ್ದು, ಜನರ ತೆರಿಗೆ ಹಣ ಕಾಡುಪಾಲು ಆದಂತಿದೆ. ಇದುವರೆಗೂ ಆಸ್ಪತ್ರೆಯ ಆವರಣದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ಕಟ್ಟಡ ನಿರ್ಮಾಣ ನಡೆಯುತ್ತಿದೆಯೇ ವಿನಃ ಗ್ರಾಮಸ್ಥರಿಗೆ ಪ್ರಯೋಜನ ಮಾತ್ರ ಶೂನ್ಯ ಎಂಬಂತಾಗಿದೆ.
ಇಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದು ವೈದ್ಯರ ಹುಡುಕಾಟದಲ್ಲಿದ್ದೆವೆ ಎಂಬ ಹಾರಿಕೆಯ ಉತ್ತರ ಅಧಿಕಾರಿಗಳದ್ದಾಗಿದೆ. ಕಳೆದ ಬಾರಿ ಮಡಿಕೇರಿ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಿ ಗ್ರಾಮಕ್ಕೆ ಆಸ್ಪತ್ರೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿರ್ಣಯ ಕೈಗೊಂಡಿದ್ದರೂ, ಯಾವದೇ ಪ್ರಯೊಜನ ಕಂಡಂತಿಲ್ಲ. ಸರಕಾರ ಹಾಗೂ ಸಂಬಂಧಿಸಿದ ಜನಪ್ರತಿನಿದಿಗಳು ಇನ್ನಾದರು ತ್ವರಿತವಾಗಿ ಈ ಬಗ್ಗೆ ಗಮನಹರಿಸಿ ಜನತೆಗೆ ಅತ್ಯಗತ್ಯವಾದ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿ ನೇಮಕಕ್ಕೆ ಕ್ರಮ ಕ್ರಮಗೊಳ್ಳಬೇಕೆಂಬದೆ ಗ್ರಾಮಸ್ಥರ ಆಗ್ರಹವಾಗಿದೆ.
ವರದಿ- ಹೊದ್ದೆಟ್ಟಿ ಸುಧೀರ್.