ಮಡಿಕೇರಿ, ಡಿ. 16: ನ. 24 ರಂದು ಮಂಡ್ಯದ ಪಾಂಡವಪುರ ತಾಲೂಕಿನ ಕನಗನಮರಡಿ ಎಂಬ ಗ್ರಾಮದ ಬಳಿ ಬಸ್ಸೊಂದು ನಿಯಂತ್ರಣ ತಪ್ಪಿ ನಾಲೆಗೆ ಬಿದ್ದು 30 ಜನರನ್ನು ಬಲಿ ಪಡೆದಿತ್ತು. ದುರಂತ ನಡೆದ ಬಳಿಕ ನಾಲೆಗೆ ಬಿದ್ದ ಬಸ್ 15 ವರ್ಷ ಮಂಗಳೂರಿನಲ್ಲಿ ಓಡಾಟ ನಡೆಸಿ ಕೊನೆಗೆ ಅಲ್ಲಿ ಸಂಚಾರಕ್ಕೆ ಅನುಮತಿ ಸಿಗದೆ ಮಂಡ್ಯದಲ್ಲಿ ಸಂಚರಿಸುತಿತ್ತು ಎಂಬ ಆಘಾತಕಾರಿ ಸಂಗತಿ ಬಯಲಾಯಿತು. ಆದರೇನು ಪ್ರಯೋಜನ ಅದಾಗಲೇ 30 ಜೀವಗಳು ಹೋಗಿದ್ದವು.

ಕೊಡಗಿಗೂ ಹೊರ ರಾಜ್ಯದ ಬಸ್‍ಗಳು ಪ್ರವಾಸಿಗರನ್ನು ತುಂಬಿಕೊಂಡು ಬರುತ್ತವೆ. ಈ ರೀತಿ ಬರುವ ಬಸ್‍ಗಳಿಗೆ ಪರ್ಮಿಟ್ ಇರುತ್ತದೆಯೆ? ಇಲ್ಲವೆ? ದೇವರೆ ಬಲ್ಲ! ಅನಾಹುತಗಳಾದಾಗಲೇ ನಿಜ ಸಂಗತಿ ಬಯಲಾಗುವದು.ಹೌದು.., ಪ್ರವಾಸೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕೊಡಗಿನಲ್ಲಿ ಪ್ರವಾಸೋದ್ಯಮದಿಂದ ಬರುವ ಆದಾಯದಲ್ಲೂ ಸರಕಾರಕ್ಕೆ ತೆರಿಗೆ ಪಾವತಿಯಾಗುತ್ತಿದೆ. ಪ್ರವಾಸಿಗರ ಆಗಮನದಿಂದ ಬರುವ ಆದಾಯ ಇಲ್ಲಿನ ಮಂದಿಗೆ ಹೆಚ್ಚಾದರೂ; ಕಡಿಮೆಯಾದರೂ ಸರಕಾರಕ್ಕೆ ಸಲ್ಲಬೇಕಾದ ಪಾಲು ಸಲ್ಲಿಕೆಯಾಗುತ್ತಿದೆ.

ಆದರೆ.., ಕೊಡಗಿನ ಸೌಂದರ್ಯವನ್ನು ಸವಿಯಲು ಕೇರಳ, ತಮಿಳುನಾಡು ಹಾಗೂ ನಮ್ಮದೇ ರಾಜ್ಯದಿಂದ ಪ್ರವಾಸಿಗರನ್ನು ಕರೆತರುವ ಅಲ್ಲಿನ ಖಾಸಗಿ ಬಸ್‍ಗಳಿಗೆ ಮಾತ್ರ ಪರ್ಮಿಟ್ ಇತ್ಯಾದಿಗಳು ಅನ್ವಯವಾಗುತ್ತಿಲ್ಲ. ಕೊಡಗಿನ ಜನ ಕೇರಳ ರಾಜ್ಯವನ್ನು ತಮ್ಮ ವಾಹನಗಳಲ್ಲಿ ಪ್ರವೇಶಿಸುತ್ತಿದ್ದಂತೆ ಗಲ್ಲಿ ಗಲ್ಲಿಗಳಲ್ಲಿ ವಾಹನಗಳಿಂದ ಪರವಾನಗಿ ಶುಲ್ಕ ವಸೂಲಿ ಮಾಡುವ ಕೇರಳದ ಕಾನೂನು ಕರ್ನಾಟಕದಲ್ಲಿ ಅದರಲ್ಲೂ ಮೌನದ ಕೊಡಗು ಜಿಲ್ಲೆಯಲ್ಲಿ ಜಾರಿಯಾಗದಿರುವ ಹಿನ್ನೆಲೆಯಲ್ಲಿ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ಹಣ ನಷ್ಟವಾಗುತ್ತಿದೆ.

ಕೊಡಗಿನ ಗಡಿ ವಾಣಿಜ್ಯ ನಗರಿ ಕುಶಾಲನಗರ ಪಟ್ಟಣಕ್ಕೆ ಪ್ರವಾಸ ಕಾಲದಲ್ಲಿ ಪ್ರತಿನಿತ್ಯ 50 ರಿಂದ 70 ಬಸ್‍ಗಳಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ಪ್ರವಾಸಿಗರು ಆಗಮಿಸುತ್ತಾರೆ. ಕೇರಳ, ತಮಿಳುನಾಡು ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಅಂತರ್ರಾಜ್ಯ ಬಸ್‍ಗಳಿಗೆ ಸುಮಾರು 18 ಸಾವಿರ ರೂ.ಗಳಷ್ಟು ಪರವಾನಗಿ ಶುಲ್ಕವನ್ನು ಸರಕಾರ ನಿಗದಿ ಮಾಡಿದೆ. ಆದರೆ ಈ ಶುಲ್ಕ ವಸೂಲಾತಿ ಸಮರ್ಪಕವಾಗಿ ನಡೆಯುತ್ತಿಲ್ಲ.

(ಮೊದಲ ಪುಟದಿಂದ) ಕುಶಾಲನಗರ ಗಡಿಯಲ್ಲಿ ಯಾವದೇ ಚೆಕ್‍ಪೋಸ್ಟ್‍ಗಳಿಲ್ಲ. ಪರವಾನಗಿ ಶುಲ್ಕ ವಸೂಲಾತಿಗೆ ಯಾವದೇ ಕೇಂದ್ರಗಳಿಲ್ಲ. ಆಗೊಮ್ಮೆ ಈಗೊಮ್ಮೆ ಆರ್‍ಟಿಓ ಅಧಿಕಾರಿಗಳು ಭೇಟಿ ನೀಡಿದಾಗ ಶುಲ್ಕ ವಸೂಲಾತಿ ನಡೆಯುತ್ತದೆ. ಹೊರತಾಗಿ ಉಳಿದ ಸಂದರ್ಭಗಳಲ್ಲಿ ಅಂತರ್ರಾಜ್ಯ ಖಾಸಗಿ ಬಸ್‍ಗಳನ್ನು ಕೇಳುವವರೇ ಇಲ್ಲ!! ಪ್ರತಿ ವರ್ಷದ ಕನಿಷ್ಟ ಆರು ತಿಂಗಳು ಈ ರೀತಿ ಬಸ್‍ಗಳು ಪ್ರವಾಸಿಗರನ್ನು ಕರೆ ತರುತ್ತವೆ. ಪ್ರವಾಸ ಬಂದ ಸಂದರ್ಭ ಅಪಘಾತಗಳು ಸಂಭವಿಸಿದರೆ ಮೃತಪಟ್ಟವರಿಗೆ ಸರಕಾರ ಅಲ್ಪಸ್ವಲ್ಪ ಹಣ ನೀಡಿ ಕೈತೊಳೆದುಕೊಳ್ಳುತ್ತದೆ.

ಇಂತಹ ಸಂದರ್ಭಗಳಲ್ಲಿ ಪರವಾನಗಿ ಶುಲ್ಕ (ಪರ್ಮಿಟ್)ವನ್ನು ಸಮರ್ಪಕವಾಗಿ ಪಾವತಿಸಿ ಕಾನೂನಾತ್ಮಕವಾಗಿ ಸಂಬಂಧಿಸಿದ ಬಸ್‍ನವರು ದಾಖಲೆಗಳನ್ನು ಹೊಂದಿಕೊಂಡರೆ ಮಾತ್ರ ಮೃತ ಕುಟುಂಬಗಳಿಗೆ ಇನ್ನು ಹೆಚ್ಚಿನ ನೆರವು ಲಭಿಸುತ್ತದೆ. ಒಂದು ವೇಳೆ ಪರ್ಮಿಟ್ ರಹಿತವಾಗಿ ಬಂದು ವಾಹನಗಳು ಅವಘಡಕ್ಕೀಡಾದರೆ ಮೃತ ಕುಟುಂಬಗಳ ಸ್ಥಿತಿ ಅಧೋಗತಿ ಎಂಬಂತಾಗುತ್ತದೆ. ಈ ಬಗ್ಗೆ ಸರಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಗಮನ ಹರಿಸಲೇಬೇಕಾದ ಅನಿವಾರ್ಯತೆ ಇದೆ.

ಬೇಕಾಬಿಟ್ಟಿಯಾಗಿ ಜನರನ್ನು ತುಂಬಿಕೊಂಡು ಕೊಡಗಿಗೆ ಬರುವ ಕೇರಳ, ತಮಿಳುನಾಡು ಬಸ್‍ಗಳಿಗೆ ಅಲ್ಲಿನಂತೆಯೇ ಇಲ್ಲೂ ಕೂಡ ಕಠಿಣ ಕಾನೂನಿನ ವ್ಯವಸ್ಥೆ ಜಾರಿಯಾದರೆ ಅದೆಷ್ಟೋ ಜೀವಗಳಿಗೆ ಭದ್ರತೆ ಒದಗಿಸಿದಂತಾಗುತ್ತದೆ.

ಕೊಡಗಿನ ಗಡಿ ಭಾಗಗಳಲ್ಲಿ ಚೆಕ್‍ಪೋಸ್ಟ್ ವ್ಯವಸ್ಥೆ ಮಾಡುವ ಮೂಲಕ ಅಂತರ್ರಾಜ್ಯ ವಾಹನಗಳಿಂದ ಪರವಾನಗಿ ಶುಲ್ಕ ವಸೂಲಾತಿಯನ್ನು ಸಮರ್ಪಕವಾಗಿ ಹಾಗೂ ಕಡ್ಡಾಯವಾಗಿ ವಸೂಲಿ ಮಾಡುವ ವ್ಯವಸ್ಥೆ ಜಾರಿಗೊಳಿಸಿದರೆ ಸರಕಾರದ ಬೊಕ್ಕಸ ತುಂಬುವದರ ಜೊತೆ ಪ್ರವಾಸಿಗರ ಜೀವಕ್ಕೂ ಭದ್ರತೆ ಒದಗಿಸಿದಂತಾಗುತ್ತದೆ ಎಂದು ಜಿಲ್ಲಾ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

-ಉಜ್ವಲ್ ರಂಜಿತ್