ಬೆಂಗಳೂರು, ಡಿ. 16: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ಕೊಡವ ಜನಾಂಗದ ಪ್ರಾತಿನಿಧಿಕ ಸಂಸ್ಥೆಯಾಗಿರುವ ವಸಂತನಗರದಲ್ಲಿರುವ ಬೆಂಗಳೂರು ಕೊಡವ ಸಮಾಜಕ್ಕೆ ಇಂದು ಭಾರೀ ಬಿರುಸಿನ ಚಟುವಟಿಕೆಗಳ ನಡುವೆ ಚುನಾವಣೆ ನಡೆಯಿತು. ಪ್ರತಿಷ್ಠಿತ ಸಮಾಜವಾಗಿರುವ ಈ ಸಮಾಜದ ನೂತನ ಆಡಳಿತ ಮಂಡಳಿಯ 2018-21ನೇ ಸಾಲಿನ ಅಧ್ಯಕ್ಷರಾಗಿ ಮುಕ್ಕಾಟಿರ ನಾಣಯ್ಯ ಅವರು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಮಲ್ಲೇಂಗಡ ಮೀರ ಅವರು ಚುನಾಯಿತರಾದರೆ, ಕಾರ್ಯದರ್ಶಿಯಾಗಿ ಚೆರಿಯಪಂಡ ಸುರೇಶ್, ಜಂಟಿ ಕಾರ್ಯದರ್ಶಿಯಾಗಿ ಕೊಕ್ಕಲೆರ ಕುಟ್ಟಪ್ಪ, ಖಜಾಂಚಿಯಾಗಿ ಉಳ್ಳಿಯಡ ಅಯ್ಯಪ್ಪ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಬಾಳೆಕುಟ್ಟಿರ ರಘು ನಂಜಪ್ಪ ಅವರುಗಳು ನೇಮಕಗೊಂಡಿದ್ದಾರೆ. ಹೊಸ ಆಡಳಿತ ಮಂಡಳಿಗೆ ಈ ಬಾರಿ ಈ ಹಿಂದಿನ ಅವಧಿಗಳಿಗಿಂತ ತೀವ್ರ ಪೈಪೋಟಿಯುತವಾಗಿ ಚುನಾವಣೆ ನಡೆಯಿತು. ಚೆನ್ನಪಂಡ ಕೆ. ಸುಬ್ಬಯ್ಯ ನೇತೃತ್ವದ ತಂಡ ಹಾಗೂ ಮುಕ್ಕಾಟಿರ ಟಿ. ನಾಣಯ್ಯ ಅವರ ನೇತೃತ್ವದ ತಂಡದಲ್ಲಿ ತಲಾ ಆರು ಮಂದಿ ಈ ಬಾರಿಯ ಸ್ಪರ್ಧಾ ಕಣದಲ್ಲಿದ್ದು, ಈ ಚುನಾವಣೆ ಕೇವಲ ಬೆಂಗಳೂರು ಮಾತ್ರವಲ್ಲ, ಕೊಡಗು ಜಿಲ್ಲೆಯಲ್ಲೂ ತೀವ್ರ ಕುತೂಹಲ ಸೃಷ್ಟಿಸಿತ್ತು. ಇತ್ತಂಡಗಳ ಜಿದ್ದಾ ಜಿದ್ದಿನ ಸ್ಪರ್ಧೆಯಿಂದಾಗಿ ಈ ಬಾರಿಯ ಚುನಾವಣಾ ಕದನ ಹೆಚ್ಚು ಸ್ಪರ್ಧಾತ್ಮಕವಾಗಿತ್ತು. ಬೆಳಿಗ್ಗೆಯಿಂದಲೇ ಸಮಾಜದ ಆವರಣದಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿತ್ತು. ಸುಮಾರು 12 ಸಾವಿರದಷ್ಟು ಸದಸ್ಯರು ಮತದಾರರಾಗಿದ್ದರಿಂದ ಸಹಜವಾಗಿಯೇ ಈ ಚುನಾವಣೆ ಎಲ್ಲರ ಗಮನ ಸೆಳೆಯುವಂತಾಗಿತ್ತು. ಮತದಾನಕ್ಕಾಗಿ ವಿದ್ಯುನ್ಮಾನ ಮತಯಂತ್ರವನ್ನು ಬಳಸಲಾಗಿತ್ತು.
ವಾರ್ಷಿಕ ಮಹಾಸಭೆ : ಸಮಾಜದ 51ನೆಯ ವಾರ್ಷಿಕ ಮಹಾಸಭೆ ಹಾಲಿ ಅಧ್ಯಕ್ಷರಾಗಿದ್ದ ಮಂಡೇಡ ರವಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಈ ಸಂದರ್ಭ ನಡೆಯಿತು. ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಹಾಗೂ ಸಮಾಜದ ಕಾರ್ಯಚಟುವಟಿಕೆಗಳ ಕುರಿತು ಚರ್ಚೆ ನಡೆಯಿತು.