ಮಡಿಕೇರಿ, ಡಿ. 17: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ವಿಶ್ವ ಅಲ್ಪಸಂಖ್ಯಾತ ಜನಾಂಗದ ಹಕ್ಕುಗಳ ದಿನಾಚರಣೆ ಅಂಗವಾಗಿ ತಾ. 18 ರಂದು (ಇಂದು) ನಾಪೋಕ್ಲುವಿನ ಕೊಳಕೇರಿಯಲ್ಲಿರುವ ಅಪ್ಪಚ್ಚೀರ ರಮ್ಮಿ ನಾಣಯ್ಯ ಅವರ ಕಾವೇರಿ ಎಸ್ಟೇಟ್ ಮೈದಾನದಲ್ಲಿ ವಾರ್ಷಿಕ ತೋಕ್ ನಮ್ಮೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ಬುಡಕಟ್ಟು ಕುಲದ ನಾಗರಿಕತೆ ಉಗಮವಾದಂದಿನಿಂದ ಆಯುಧಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ತೋಕ್ ನಮ್ಮೆ (ಕೋವಿ ಹಬ್ಬ) ಆಚರಣೆಯ ಮೂಲಕ ಕೋವಿ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮೂಲನಿವಾಸಿ ಕೊಡವರ ಕೋವಿ ಹಕ್ಕು ಮತ್ತು ರಕ್ಷಣೆ ಅಭಾದಿತವಾಗಿ ಮುಂದುವರೆಯಲು ರಾಜ್ಯಾಂಗ ಖಾತ್ರಿ ನೀಡಬೇಕು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೋವಿ ಹಬ್ಬದ ಸಂದರ್ಭ ಅಂಗೀಕರಿಸಲಾಗುವದು ಎಂದು ತಿಳಿಸಿದರು.

ವಿರಾಟ್ ಹಿಂದೂಸ್ಥಾನ್ ಸಂಗಂನ ಅಖಿಲ ಭಾರತ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಬೆಳಿಗ್ಗೆ 10.30 ಗಂಟೆಗೆ ತೋಕ್ ಪಾಟ್‍ನೊಂದಿಗೆ ಕೋವಿಗೆ ಸಾಮೂಹಿಕ ಪೂಜೆ ಸಲ್ಲಿಸ ಲಾಗುವದು. ನಂತರ ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಮತ್ತು ವಿಶೇಷ ಬಹುಮಾನ ನೀಡಲಾಗುವದು ಎಂದು ನಾಚಪ್ಪ ಮಾಹಿತಿ ನೀಡಿದರು.

ಹಾರಂಗಿ ತೆರವುಗೊಳಿಸಿ

ಕೊಡಗಿನಲ್ಲಿ ಸಂಭವಿಸಿದ ಭೂಕುಸಿತಕ್ಕೆ ಹಾರಂಗಿ ಜಲಾಶಯವೂ ಒಂದು ಕಾರಣವೆಂದು ವಿಜ್ಞಾನಿಗಳು ಒಪ್ಪಿಕೊಂಡಿದ್ದು, ಅನಾಹುತ ನಡೆದ ಆರಂಭದಿಂದಲೂ ಸಿಎನ್‍ಸಿ ಪ್ರತಿಪಾದಿಸಿದ ವಾದ ನಿಜವಾಗಿದೆ. ಜನರ ಹಾದಿ ತಪ್ಪಿಸುವ ಪಟ್ಟಭದ್ರ ಹಿತಾಸಕ್ತಿಗಳ ಪ್ರಯತ್ನಕ್ಕೆ ಸೋಲಾಗಿದ್ದು, ಸರ್ಕಾರ ತಕ್ಷಣ ಅಪಾಯಕಾರಿ ಯಾಗಿರುವ ಹಾರಂಗಿಯನ್ನು ತೆರವುಗೊಳಿಸಬೇಕೆಂದು ನಾಚಪ್ಪ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಎನ್‍ಸಿ ಪ್ರಮುಖ ಅರೆಯಡ ಗಿರೀಶ್

ಉಪಸ್ಥಿತರಿದ್ದರು.