ಗೋಣಿಕೊಪ್ಪಲು, ಡಿ. 17: ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ತಾ. 18 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ತಿತಿಮತಿಯ ಪ್ರವಾಸಿ ಮಂದಿರದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯಲಾಗಿದೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಾಡಾನೆ ಹಾವಳಿಯಿಂದ ರೈತರು ತೀವ್ರ ತೊಂದರೆ ಎದುರಿಸುತ್ತಿರುವ ಬಗ್ಗೆ ಬೆಂಗಳೂರಿನ ಪಿಸಿಸಿಎಫ್ ಪುನತಿ ಶ್ರೀಧರ್ ವನ್ಯಜೀವಿ ವಿಭಾಗದ ಅಧಿಕಾರಿ ಜಯರಾಂರೊಂದಿಗೆ ಜಿಲ್ಲೆಯ ರೈತರ ಸಮಸ್ಯೆಯ ಬಗ್ಗೆ ರೈತ ಸಂಘದ ಪದಾಧಿಕಾರಿಗಳು ಚರ್ಚಿಸಿದ್ದರಿಂದ ಹಿರಿಯ ಅಧಿಕಾರಿಗಳು ಕೊಡಗು ಜಿಲ್ಲಾ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ. ರೈತರು ತಮ್ಮ ವ್ಯಾಪ್ತಿಯಲ್ಲಿ ಕಾಡಾನೆಯಿಂದ ಆಗುತ್ತಿರುವ ತೊಂದರೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸಭೆಯಲ್ಲಿ ಮಾಹಿತಿ ನೀಡಬಹುದಾಗಿದೆ ಎಂದು ಸುಜಯ್ ಬೋಪಯ್ಯ ತಿಳಿಸಿದ್ದಾರೆ.