ಮಡಿಕೇರಿ ಡಿ. 17: ಶ್ರೀಅಯ್ಯಪ್ಪ ದೀಪಾರಾಧನಾ ಸಮಿತಿ ವತಿಯಿಂದ ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿ ಶ್ರೀಅಯ್ಯಪ್ಪ ದೇವರ ದೀಪಾರಾಧನಾ ಉತ್ಸವವು ತಾ. 19 ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಖಜಾಂಚಿ ಕೆ.ಜಿ.ಚಂದ್ರಶೇಖರ್ ದೀಪಾರಾಧನೆಯ ವಿವಿಧ ಪೂಜಾ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಅಂದು ಬೆಳಿಗ್ಗೆ 5.30 ಗಂಟೆಗೆ ಗಣಪತಿಹೋಮ, 6.30ಕ್ಕೆ ಪ್ರತಿಷ್ಠಾಪನಾ ಪೂಜೆ, 8 ರಿಂದ 12 ಗಂಟೆಯ ವರೆಗೆ ಪುಷ್ಪಾರ್ಚನೆ, ಮಹಾಮಂಗಳಾರತಿಯಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ.

1 ಗಂಟೆಗೆ ಪಾಲಕೊಂಬು ಪ್ರತಿಷ್ಠಾಪನೆ, 1.30 ಗಂಟೆಗೆ ತಾಯಂಬಕಂ (ಚೆಂಡೆಸೇವೆ) ನಡೆಯಲಿದ್ದು, 2 ಗಂಟೆಗೆ ಪಾಲುಕೊಂಬು ಸಹಿತ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಸಾಗಲಿದೆ.

ಸಂಜೆ 6 ಗಂಟೆಗೆ ದೀಪಾರಾಧನೆ, 6.30 ರಿಂದ 7.30ರ ವರೆಗೆ ಅಯ್ಯಪ್ಪ ಪೂಜೆ ನಡೆಯಲಿದ್ದು, ರಾತ್ರಿ 7.30 ರಿಂದ 8 ಗಂಟೆಯವರೆಗೆ ದುರ್ಗಾಪೂಜೆ, ಸುಬ್ರಮಣ್ಯ ಪೂಜೆ ಹಾಗೂ 8.30 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ.

ರಾತ್ರಿ 12 ಗಂಟೆಯಿಂದ 2 ಗಂಟೆಯವರೆಗೆ ಅಗ್ನಿಪೂಜೆ, 2 ಗಂಟೆಯಿಂದ 5.30ರ ವೆರೆಗೆ ಪೊಲಿಪಾಟ್ ಪಾಲ್ಕಿಂಡಿ ತಿರಿ ಉಳಿಚಲ್, ವೆಟ್ಟುಂತಡವು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಚಂದ್ರಶೇಖರ್ ಮಾಹಿತಿ ನೀಡಿದರು.

ಸಮಿತಿಯ ಅಧ್ಯಕ್ಷ ಬೊಳ್ಳಚಂಡ ಪ್ರದೀಪ್ ಮಾತನಾಡಿ, ಮಧ್ಯಾಹ್ನ 2 ಗಂಟೆಗೆ ಶ್ರೀ ಮುತ್ತಪ್ಪ ದೇವಾಲಯದಿಂದ ಹೊರಡುವ ಉತ್ಸವ ಮೂರ್ತಿಯ ಮೆರವಣಿಗೆಯು ಸಂಜೆ 6 ಗಂಟೆಗೆ ಶ್ರೀ ಅಶ್ವಿನಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ತಾಲಾಪೊಲಿ ಸಮೇತ ಮರಳಿ ಅಯ್ಯಪ್ಪ ದೇವಾಲಯಕ್ಕೆ ಬರಲಿದೆ ಎಂದರು.

ಮಹಿಳಾ ಭಕ್ತರು ಹಾಗೂ ಮಕ್ಕಳು ಅಧಿಕ ಸಂಖ್ಯೆಯಲ್ಲಿ ಕಳಸದೊಂದಿಗೆ ಪಾಲ್ಗೊಳ್ಳುವಂತೆ ತಿಳಿಸಿದ ಪ್ರದೀಪ್ ದಾನಿಗಳು ಅನ್ನದಾನಕ್ಕೆ ನೀಡುವ ಅಕ್ಕಿ, ತರಕಾರಿ ಇತ್ಯಾದಿ ದವಸ ಧಾನ್ಯಗಳನ್ನು ಶ್ರೀಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಕಚೇರಿಗೆ ತಲುಪಿಸುವಂತೆ ಸಲಹೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಎಂ.ಕೆ. ದಾಮೋದರ್, ಕಾರ್ಯಾಧ್ಯಕ್ಷ ಗೋಪಿಸ್ವಾಮಿ, ಪ್ರಧಾನ ಕಾರ್ಯದರ್ಶಿ, ಬಿ.ಇ. ಹೇಮಂತ್ ಕುಮಾರ್ ಹಾಗೂ ಕಾರ್ಯದರ್ಶಿ ಟಿ.ಆರ್. ಹರೀಶ್ ಉಪಸ್ಥಿತರಿದ್ದರು.