ಬೆಂಗಳೂರು, ಡಿ.17: ಕರ್ನಾಟಕದ ಯಾವದೇ ಮುಜರಾಯಿ ದೇವಾಲಯಗಳಲ್ಲಿ ಇನ್ನು ಮುಂದೆ ಅನ್ನ ದಾಸೋಹದ ಮೂಲಕ ಪ್ರಸಾದ ರೂಪ ವಿತರಣೆಗೆ ಸರಕಾರೀ ಸ್ಥಳೀಯ ಆರೋಗ್ಯ ಇಲಾಖಾ ಅಧಿಕಾರಿ ಗಳಿಂದ ಅನುಮತಿ ಪಡೆಯಬೇಕೆಂದು ಕಡ್ಡಾಯ ಮಾಡಲಾಗಿದೆ. ಚಾಮ ರಾಜನಗರದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದ ನಂತರ ಎಚ್ಚೆತು ್ತಕೊಂಡಿರುವ ಮುಜರಾಯಿ ಇಲಾಖೆ, ಇನ್ನುಮುಂದೆ ಎಲ್ಲ ದೇವಾಲಯಗಳಲ್ಲಿ ಪ್ರಸಾದ ವಿತರಣೆಗೆ ಅನುಮತಿ ಹಾಗೂ ಅಡುಗೆ ಮನೆಗೆ ಸಿಸಿಟಿವಿ ಕಡ್ಡಾಯ ಗೊಳಿಸಿ ಆದೇಶ ಹೊರಡಿಸಿದೆ.ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ಅನ್ನದಾಸೋಹ ನಡೆಸುವ ಮುನ್ನ ಅನುಮತಿ ಪಡೆಯಬೇಕು ಮತ್ತು ದೇವರ ನೈವೇದ್ಯ ಹಾಗೂ ದಾಸೋಹ ತಯಾರಿಸುವ ಕೋಣೆಯಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
ತಯಾರಿಸಿದ ಪ್ರಸಾದ ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ವಿತರಣೆ ಮಾಡಬೇಕು. ದೇವಾಲಯ ಗಳಲ್ಲಿ ತಯಾರಿಸುವ ಪ್ರಸಾದವನ್ನು ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಬೇಕು. ದೇವಾಲಯಕ್ಕೆ ಆಗಮಿಸುವ
(ಮೊದಲ ಪುಟದಿಂದ) ಭಕ್ತರಿಗೆ ನೀಡುವ ಪ್ರಸಾದಕ್ಕೆ ಆರೋಗ್ಯಾಧಿಕಾರಿಯಿಂದ ಅನುಮತಿ ಪಡೆದ ಮೇಲೆಯೇ ವಿತರಣೆ ಮಾಡಬೇಕು ಎಂದು ಸೂಚಿಸಲಾಗಿದೆ.
ದೇವಾಲಯದ ಪರಿಸರದಲ್ಲಿ ಭಕ್ತಾದಿಗಳೇ ಪ್ರಸಾದ ತಯಾರಿಸಿ ನೇರವಾಗಿ ಭಕ್ತರಿಗೆ ನೀಡುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ತಂಡದಿಂದ ಪರೀಕ್ಷೆ ಒಳಪಡಿಸಿ ಅನುಮತಿ ಪತ್ರ ಪಡೆಯುವದು ಕಡ್ಡಾಯ ಮಾಡಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮುಜರಾಯಿ ಇಲಾಖೆಯ ಜಂಟಿ ಆಯುಕ್ತ ಜಯಪ್ರಕಾಶ್ ಅವರು, ಪ್ರಸಾದ ವಿತರಣೆಗೆ ಅನುಮತಿ ಪಡೆಯಬೇಕೆಂಬ ನಿಯಮ ಮೊದಲಿನಿಂದಲೂ ಇದೆ. 2012ರಲ್ಲೇ ಇದರ ಕುರಿತು ನಾವು ಸುತ್ತೋಲೆ ಹೊರಡಿಸಿದ್ದೆವು. ಈಗ ಮತ್ತೊಮ್ಮೆ ಬದಲಾದ ನಿಯಮ ಇರುವ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದರು.
ಎಲ್ಲಾ ಮುಜರಾಯಿ ದೇವಾಲಯಗಳ ಅಡುಗೆ ಕೋಣೆಯಲ್ಲಿ ಭಟ್ಟರು ಹಾಗೂ ಸಹಾಯಕರನ್ನು ಬಿಟ್ಟು ಬೇರೆ ಯಾರನ್ನೂ ಸೇರಿಸಬಾರದು. ಹಾಗೇ ಸಿಸಿಟಿವಿಯನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ಜಯಪ್ರಕಾಶ್ ಮಾಹಿತಿ ನೀಡಿದ್ದಾರೆ.