ಮಡಿಕೇರಿ, ಡಿ. 17 : ಮಡಿಕೇರಿ ನಗರಸಭೆಗೆ ಒಳಪಡುವ ಮೂರು ಸರ್ಕಾರಿ ಶಾಲೆಗಳ ಶಿಕ್ಷಕರುಗಳಿಗೆ ವೇತನ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ, ವೇತನ ವಂಚಿತ ಶಿಕ್ಷಕರುಗಳಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ “ಗುರುದಕ್ಷಿಣೆಗಾಗಿ ನಡೆ” ಎನ್ನುವ ವಿನೂತನ ಪ್ರತಿಭಟನಾ ಜಾಥಾವನ್ನು ಹಮ್ಮಿಕೊಂಡಿತ್ತು.ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಅವರ ನೇತೃತ್ವದಲ್ಲಿ ಸಮಾಜಮುಖಿ ಸಂಘಟನೆಗಳ ಬೆಂಬಲದೊಂದಿಗೆ ನಗರದ ಗದ್ದಿಗೆಯಿಂದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪದಾಧಿಕಾರಿಗಳು ಸಾರ್ವಜನಿಕರು ಹಾಗೂ ವರ್ತಕರ ಮುಂದೆ ಬಿಂದಿಗೆ ಹಿಡಿದು ಗುರುದಕ್ಷಿಣೆ ರೂಪದಲ್ಲಿ ಧನ ಸಹಾಯ ಸಂಗ್ರಹಿಸಿದರು. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಘೋಷಣೆಗಳು ನಿರಂತರವಾಗಿ ಕೇಳಿ ಬರುತ್ತಲೇ ಇದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದಿದ್ದರೂ ಬಡವರ್ಗದ ವಿದ್ಯಾರ್ಥಿಗಳು ಇಂದಿಗೂ ಶೈಕ್ಷಣಿಕ ಬದುಕಿನಿಂದ ವಂಚಿತರಾಗಿ ಬಡತನದಲ್ಲಿಯೇ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ. ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಸರಕಾರಿ (ಮೊದಲ ಪುಟದಿಂದ) ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿರುವದು ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರನ್ನು ಕಡೆಗಣಿಸಿರುವದೇ ಈ ಪರಿಸ್ಥಿತಿಗೆ ಮುಖ್ಯ ಕಾರಣ ಎಂದು ದಿವಾಕರ್ ಇದೇ ಸಂದರ್ಭ ಆರೋಪಿಸಿದರು.

ಮಡಿಕೇರಿ ನಗರಸಭೆ ವ್ಯಾಪ್ತಿಗೆ ಒಳಪಡುವ ಎವಿ ಶಾಲೆ, ಹಿಂದೂಸ್ತಾನಿ ಶಾಲೆ ಹಾಗೂ ಮೈಸೂರು ರಸ್ತೆಯಲ್ಲಿರುವ ಶಾಲೆ ನಗರಸಭಾ ಶಾಲೆಗಳಾಗಿವೆ. ಈ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿದ್ದಾರೆ. ಇಂದಿನ ಡೊನೇಷನ್ ಹಾವಳಿಯ ಶಿಕ್ಷಣ ವ್ಯವಸ್ಥೆಯ ನಡುವೆ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವದೇ ಕಷ್ಟವಾಗಿದೆ. ಈ ಕಾರಣದಿಂದ ಬಡ ವರ್ಗದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಮೂರು ನಗರಸಭಾ ಶಾಲೆಗಳನ್ನೇ ಅವಲಂಬಿಸಬೇಕಾಗಿದೆ. ಆದರೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಶಿಕ್ಷಕರು ವೇತನದಿಂದ ವಂಚಿತರಾಗಿದ್ದಾರೆ. ಗುತ್ತಿಗೆ ಆಧಾರದ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ವೇತನ ದೊರೆಯುತ್ತಿಲ್ಲ. ಗೌರವ ಧನದ ರೂಪದಲ್ಲಿ ವೇತನವನ್ನು ನೀಡಬೇಕಾಗಿದ್ದ ನಗರಸಭೆ ಕಳೆದ ಅನೇಕ ವರ್ಷಗಳಿಂದ ಈ ಶಿಕ್ಷಕರಿಗಾಗಿ ಯಾವದೇ ಅನುದಾನವನ್ನು ಮೀಸಲಿಡದೆ ವಂಚಿಸುತ್ತಲೇ ಬಂದಿದೆ ಎಂದು ದಿವಾಕರ್ ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್, ಚೇಂಬರ್ ಆಫ್ ಕಾಮರ್ಸ್‍ನ ಪ್ರಮುಖ ಅಂಬೆಕಲ್ಲು ನವೀನ್ ಕುಶಾಲಪ್ಪ, ದಸಂಸ ಯ ಸಂಘಟನಾ ಸಂಚಾಲಕರುಗಳಾದ ಶಿವಕುಮಾರ್, ಹೆಚ್.ಕೆ.ಗಣೇಶ, ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್, ಪ್ರಮುಖರಾದ ಕುಮಾರ್, ಸಿದ್ದೇಶ್ವರ, ಪ್ರೇಮ್, ಐಎನ್‍ಟಿಯುಸಿಯ ದಿನೇಶ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.

ರೂ. 18 ಸಾವಿರ ಸಂಗ್ರಹ : ಶಿಕ್ಷಕರುಗಳಿಗೆ ಗುರುದಕ್ಷಿಣೆ ರೂಪದಲ್ಲಿ ಆರ್ಥಿಕ ನೆರವು ನೀಡಲು ಸಾರ್ವಜನಿಕರು ಉತ್ಸುಕರಾಗಿದ್ದು, ಇಂದು ಸುಮಾರು 18 ಸಾವಿರ ರೂ. ಸಂಗ್ರಹಿಸಲಾಗಿದೆ. ಡಿ.18 ರಂದು ಕೂಡ ಧನ ಸಂಗ್ರಹ ಜಾಥಾ ನಡೆಸಲಾಗುವದು. ಮಧ್ಯಾಹ್ನ ನಗರಸಭಾ ಶಾಲೆಯಲ್ಲಿ ಕಾರ್ಯಕ್ರಮವನ್ನು ಸಮಾರೋಪಗೊಳಿಸಿ ಸಂಗ್ರಹವಾದ ಹಣವನ್ನು ವೇತನ ವಂಚಿತ ಶಿಕ್ಷಕರುಗಳಿಗೆ ನೀಡಲಾಗುವದೆಂದು ದಿವಾಕರ್ ಇದೇ ಸಂದರ್ಭ ತಿಳಿಸಿದರು.