ಪೊನ್ನಂಪೇಟೆ, ಡಿ. 17: ವಿವಿಧ ಕಾರಣಗಳಿಂದ ಮೊದಲೇ ತೊಂದರೆ ಅನುಭವಿಸುತ್ತಿರುವ ಕೊಡಗಿನ ರೈತರು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಇದೀಗ ರೈತರು ಬೆಳೆದ ಭತ್ತದ ಹುಲ್ಲನ್ನು ಬೇರೆಡೆಗೆ ಸಾಗಿಸಲು ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ ಭತ್ತದ ಕಟಾವು ಪೂರ್ಣಗೊಂಡಿದ್ದರೂ ಭತ್ತ ಖರೀದಿ ಕೇಂದ್ರ ಆರಂಭವಾಗದಿರುವ ಕಾರಣದಿಂದಾಗಿ ರೈತರು ಭತ್ತವನ್ನು ಸರಿಯಾದ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ ಎಂದು ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಕೊಡಗಿನ ಹಲವಾರು ಸಮಸ್ಯೆಗಳಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಮನ್ವಯ ಸಮಿತಿ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದಾಗಿ ಕಂಗೆಟ್ಟಿರುವ ಕೊಡಗಿನ ರೈತಾಪಿ ಜನ ಇದೀಗ ಹುಲ್ಲನ್ನು ಮಾರಾಟ ಮಾಡಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಕೊಡಗಿನ ಹುಲ್ಲನ್ನು ಕೇರಳಕ್ಕೆ ಸಾಗಿಸಲು ನಿರ್ಬಂಧ ಹೇರಿರುವದೇ ಇದಕ್ಕೆ ಕಾರಣ ಎಂದು ಹೇಳಿದರು.
ಕೇರಳದಲ್ಲೂ ಕೂಡ ಕೊಡಗಿನ ಈ ಭತ್ತಕ್ಕೆ ಬೇಡಿಕೆ ಕಡಿಮೆಯಾಗಿದೆ. ಭತ್ತ ಖರೀದಿ ಬಗ್ಗೆ ಸಂಬಂಧಿಸಿದ ಕೃಷಿ ಇಲಾಖೆಯನ್ನು ವಿಚಾರಿಸಿದರೆ ಆಹಾರ ಇಲಾಖೆಯ ಮೇಲೆ ಜವಾಬ್ದಾರಿ ಹೊರಿಸಿ ನುಣುಚಿಕೊಳ್ಳುತ್ತಿದ್ದಾರೆ. ಈ ಕುರಿತು ಇಲಾಖೆಗಳ ನಡುವೆ ಹೊಂದಾಣಿಕೆಯೇ ಇಲ್ಲ ಎಂದು ಆರೋಪಿಸಿರುವ ಅವರು, ಭತ್ತಕ್ಕೆ ಕನಿಷ್ಟ ರೂ. 2500 ಬೆಲೆ ದೊರೆತರೆ ಮಾತ್ರ ಚೇತರಿಕೆ ಸಾಧ್ಯ. ಈ ನಿಟ್ಟಿನಲ್ಲಿ ಸರಕಾರ ಕೂಡಲೆ ಕಾರ್ಯಪ್ರವೃತ್ತವಾಗಬೇಕು ಎಂದು ಆಗ್ರಹಿಸಿದ್ದಾರೆ.