ಮಡಿಕೇರಿ, ಡಿ. 17: ಕೇಂದ್ರ ಸರಕಾರದಿಂದ ಇನ್ನೂ ವಿದ್ಯುತ್ ಸೌಲಭ್ಯ ಲಭಿಸದಿರುವ ಬಡ ಕುಟುಂಬಗಳನ್ನು ಗುರುತಿಸಿ ಅಂಥ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಕರ್ಯ ಕಲ್ಪಿಸುವ ದಿಸೆಯಲ್ಲಿ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ.ಈ ಸಂಬಂಧ ಎಲ್ಲ ಗ್ರಾ.ಪಂ. ಹಂತದಲ್ಲಿ ಪಂಚಾಯಿತಿ ಮೂಲಕ ಸಮೀಕ್ಷೆ ನಡೆಸಲಾಗಿದೆ. ಚೆಸ್ಕಾಂ ಅಧಿಕಾರಿಗಳಿಂದಲೂ ಸರಕಾರ ಪ್ರತ್ಯೇಕ ವರದಿ ಪಡೆದಿದೆ. ಮಾತ್ರವಲ್ಲದೆ, ಕೇಂದ್ರ ಸರಕಾರದ ಅಧೀನವಿರುವ ಅಂಚೆ ಇಲಾಖೆ ಮುಖಾಂತರ ಪ್ರತ್ಯೇಕ ಮಾಹಿತಿ ಸಂಗ್ರಹಿಸಲಾಗಿದೆ.ಕಳೆದ ತಿಂಗಳು ಅಂಚೆ ಇಲಾಖೆಯಿಂದ ನಡೆಸಿರುವ ಸಮೀಕ್ಷೆ ಪ್ರಕಾರ, ಕೊಡಗಿನಲ್ಲಿ ಇನ್ನು ಕೂಡ 4877 ಮನೆಗಳಿಗೆ ಬೆಳಕಿನ ಭಾಗ್ಯ ಲಭಿಸದಿರುವ ಮಾಹಿತಿ ಲಭಿಸಿದೆ. ಇಲಾಖೆಯಿಂದ ನಡೆಸಲಾದ 291 ಗ್ರಾಮಗಳ ಸಮೀಕ್ಷೆ ವೇಳೆ, ಅಂಚೆ ಸಿಬ್ಬಂದಿ ಅಲ್ಲಲ್ಲಿ 12189 ಮನೆಗಳನ್ನು ಸುತ್ತಿ ಮಾಹಿತಿ ಕಲೆ ಹಾಕಿದ್ದಾರೆ. ಈ ಸಂದರ್ಭ 4,877 ಮನೆಗಳಿಗೆ ಸೌಲಭ್ಯ ಸಿಗದಿರುವ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರದ ವಿದ್ಯುತ್ ಪ್ರಸರಣ ಸಚಿವಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಅಂಚೆ ಇಲಾಖೆಯ ಜಿಲ್ಲಾ ಅಧೀಕ್ಷಕ ನಾಗೇಂದ್ರ ಖಾತರಿಪಡಿಸಿದ್ದಾರೆ.

`ಶಕ್ತಿ’ ಯೊಂದಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ತಮ್ಮ ಇಲಾಖೆ ಗುರುತಿಸಿರುವ ಮನೆಗಳಲ್ಲಿ ಬಡತನ ರೇಖೆಯಡಿ ಇರುವವರಿಗೆ ಸರಕಾರದಿಂದ ಉಚಿತ ಸೌಲಭ್ಯ ದೊರಕಲಿದೆ ಎಂದು ವಿವರಿಸಿದರು. ಅಲ್ಲದೆ, ಬಡತನ ರೇಖೆಯಿಂದ ಮೇಲ್ಮಟ್ಟದವರಿಗೆ ಕೂಡ ವಿದ್ಯುತ್ ಸೌಲಭ್ಯವಿದ್ದು, ಕನಿಷ್ಟ ಮೊತ್ತವನ್ನು ಸಂಬಂಧಿಸಿದ ಇಲಾಖೆಗೆ ಶುಲ್ಕ ಪಾವತಿಸಬೇಕೆಂಬ ನಿಯಮವಿರು ವದಾಗಿ ಸ್ಪಷ್ಟಪಡಿಸಿದರು.

ಅಂಚೆ ಇಲಾಖೆಯಿಂದ ಮಾಹಿತಿ ಸಂಗ್ರಹದ ಪ್ರಕಾರ, ಸೋಮವಾರಪೇಟೆ ಗ್ರಾಮೀಣ ಪ್ರದೇಶಗಳ ಹಲವು ಗ್ರಾಮಗಳ ಮನೆಗಳಿಗೆ ವಿದ್ಯುತ್ ಲಭಿಸದಿರುವದು ಗೋಚರಿಸಿದ್ದು, ವೀರಾಜಪೇಟೆ ತಾಲೂಕಿನ ಕೆಲವಷ್ಟು ಹಾಡಿಗಳಲ್ಲಿ ಬೆಳಕಿನ ಕೊರತೆ ಇದೆ ಎಂದು ಅಭಿಪ್ರಾಯಪಟ್ಟರು.

ಸಂಪೂರ್ಣ ವರದಿ: ಸಮೀಕ್ಷೆ ವೇಳೆ ವಿದ್ಯುತ್ ಕಲ್ಪಿಸದಿರಲು ನಿಖರ ಕಾರಣ, ಒಂದೆಡೆಯಿಂದ ನಿರ್ದಿಷ್ಟ ಮನೆಗೆ ಇರುವ ದೂರ, ಬೇಕಾಗುವ ಕಂಬಗಳು ಹಾಗೂ ವಿದ್ಯುತ್ ತಂತಿಗಳ ಉದ್ದ, ಇತರ ಉಪಕರಣಗಳ ಅವಶ್ಯಕತೆ ಕುರಿತು ಕೂಡ ಕೇಂದ್ರ ಸರಕಾರಕ್ಕೆ ವಿವರ ಒದಗಿಸಲಾಗಿದೆ ಎಂದು ನಾಗೇಂದ್ರ ಸ್ಪಷ್ಟಪಡಿಸಿದರು.