ಕುಶಾಲನಗರ, ಡಿ. 17: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮುಖ್ಯ ಅರ್ಚಕ ಹರಿಭಟ್ ನೇತೃತ್ವದ ಅರ್ಚಕರ ತಂಡ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಮಂಡಲ ಪೂಜೆ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಪೂಜೆ ಅಂಗವಾಗಿ ಪಾಲ್‍ಕೊಂಬು ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆಯಿತು. ಸಂಜೆ ಸ್ವಾಮಿಯ ಮೆರವಣಿಗೆ ದೇವಾಲಯ ದಿಂದ ಹೊರಟು ಕುಶಾಲನಗರ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನೆರೆದಿದ್ದ ಭಕ್ತಾದಿಗಳಿಗೆ ದೇವಸ್ಥಾನ ಸಮಿತಿಯಿಂದ ಅನ್ನಸಂತರ್ಪಣೆ ನಡೆಯಿತು. ಈ ಸಾಲಿನಿಂದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ತುಲಾಭಾರ ಸೇವೆ ಪ್ರಾರಂಭ ಗೊಂಡಿದೆ ಎಂದು ದೇವಾಲಯ ಟ್ರಸ್ಟ್ ಅಧ್ಯಕ್ಷ ಗಣಪತಿ ತಿಳಿಸಿದ್ದಾರೆ. ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ಕೆ.ಆರ್. ಶಿವಾನಂದನ್, ಪ್ರಧಾನ ಕಾರ್ಯದರ್ಶಿ ಮಹೇಶ್ ನಾಲ್ವಡೆ, ಟ್ರಸ್ಟಿಗಳಾದ ಮಣಿ, ಡಿ.ಆರ್. ಸೋಮಶೇಖರ್, ಸುಬ್ಬಯ್ಯ, ಪ.ಪಂ. ಸದಸ್ಯರಾದ ಡಿ.ಕೆ. ತಿಮ್ಮಪ್ಪ, ವಿ.ಎಸ್. ಆನಂದ್‍ಕುಮಾರ್ ಮತ್ತಿತರರು ಇದ್ದರು.